ಜಾನಕಲ್ಲು ದುರ್ಗದ ದೊರೆಯ ಜನ್ಮಸ್ಥಳ
ಹೊಸದುರ್ಗ ಸೀಮೆಯ ಮತ್ತೊಂದು ಹೆಮ್ಮೆಯ ಸ್ಥಳ ಜಾನಕಲ್ಲು. ಚಿತ್ರದುರ್ಗದ ದೊರೆಯಾದ ವೀರ ಮೆದಕೇರಿನಾಯಕನಿಗೆ ಜನ್ಮ ನೀಡಿದ ಪುಣ್ಯ. ಜಾನಕಲ್ಲು ದುರ್ಗದ ತೊದಲು ಭರಮಣ್ಣನಾಯಕನ ಮಗನಾಗಿ (1747ರಲ್ಲಿ) ಜನಿಸಿದ ವೀರಮೆದಕೇರಿನಾಯಕನು, ಹನ್ನೆರಡು ವರ್ಷದ ಬಾಲಕನಿದ್ದಾಗಲೇ, ಹಿರೇಮೆದಕೇರಿನಾಯಕನ ಮಗ 2ನೇ ಕಸ್ತೂರಿ ರಂಗಪ್ಪನಾಯಕನ ಮರಣದಿಂದ ತೆರವಾದ ಚಿತ್ರದುರ್ಗದ ಸಂಸ್ಥಾನದ ಸಿಂಹಾಸನವನ್ನು ಅಲಂಕರಿಸಿದನು. ಜಾನಗಲ್ಲು ಸ್ಥಳವು ವೀರ ಮೆದಕೇರಿನಾಯಕನಿಗೆ ಜನ್ಮ ನೀಡುವ ನಾಲ್ಕು ನೂರು ವರ್ಷಗಳ ಹಿಂದೆಯೇ ವೀರರ ನೆಲೆಯಾಗಿತ್ತು ಎಂಬುವುದಕ್ಕೆ ವೀರ-ಮಾಸ್ತಿಗಲ್ಲುಗಳೇ ಸಾಕ್ಷಿ.
ಹಿಂದಿನ ಕಾಲದಲ್ಲಿ ಈ ಸ್ಥಳವು ಜೈನರ ವಾಸಸ್ಥಳವಾಗಿದ್ದು, ಇಲ್ಲಿ ಒಂದು ಸಾವಿರ ಜೈನವಸತಿಗಳಿದ್ದವು ಎನ್ನಲಾಗಿದೆ. ಇಲ್ಲಿನ “ದೇವರ ಮರಡಿ” ಬಂಡೆಗಲ್ಲಿನ ಮೇಲೆ ಜೈನಯತಿಗಳು ಧ್ಯಾನಕ್ಕೆ ಕೂರುತಿದ್ದರಿಂದ ಮೊದಲು ಇಲ್ಲಿದೆ. “ಜೈನಕಲ್ಲು” ಎಂದು ಈ ಸ್ಥಳಕ್ಕೆ ಹೆಸರು ಬಂದು, ತದನಂತರ “ಜಾನಕಲ್ಲು” ರೂಪಾಂತರವಾಯಿತು ಎನ್ನಲಾಗಿದೆ. ಜೈನ ಸಂನ್ಯಾಸಿಗಳು ಧ್ಯಾನಕ್ಕೆ ಕೂರುತಿದ್ದ ಬಂಡೆಗಲ್ಲುಗಳ ಮೇಲೆ ಜೈನ ಸಂನ್ಯಾಸಿಗಳು ಕೊರೆದ ಚಿತ್ರ ಮತ್ತು ಲಿಪಿ ಶಾಸನವೂ ಇದೆ. ಇಂದಿಗೂ ಜಾನಕಲ್ಲಿನ ನೇಮಿನಾಥ ತೀರ್ಥಂಕರನ ಮಂದಿರವಿದ್ದು, ಅಲ್ಲದೇ ಜೈನರ ಯಾತ್ರಾಸ್ಥಳವಾಗಿಯೂ ಜಾನಕಲ್ಲು ಹಿರಿಮೆ ಹೊಂದಿದೆ.
ಜಾನಕಲ್ಲು ಎಂಬ ಗ್ರಾಮವು ಬೆಟ್ಟದ ತಪ್ಪಲಿನಲ್ಲಿದ್ದು, “ದೊಡ್ಡಕೆರೆ” ಮತ್ತು “ಕಾಮನಕೆರೆ” ಎಂಬ ಎರಡು ಕೆರೆಗಳಿವೆ. ಜಾನಕಲ್ಲು ಗ್ರಾಮದ ಹೊರವಲಯದ “ಆನೆಗೊಂದಿ”ಯಲ್ಲಿ ಹಟ್ಟಿತಿಮ್ಮಪ್ಪನ ಪೌಳಿ ಇದೆ. ಇದು ಮೆದಕೇರಿನಾಯಕನ ಮನೆದೇವರಾಗಿದ್ದು, ಇಂದಿಗೂ ವೀರ ಮೆದಕೇರಿನಾಯಕ ಕಾಣಿಕೆ ಅರ್ಪಿಸಿರುವ ಅನೇಕ ಖಡ್ಗಗಳಿವೆ.
(ಆಧಾರ: “ಹೊಸದುರ್ಗ ಸೀಮೆ ಜಾನಪದ”– ಬಾಗೂರು ನಾಗರಾಜಪ್ಪ)
|