ಹಾಲು ರಾಮೇಶ್ವರ ಕ್ಷೇತ್ರ
ಕರ್ನಾಟಕದ ಅತ್ಯಂತ್ಯ ಜನಪ್ರಿಯ ವಜ್ರ (ಒಜ್ಜರ) ಕ್ಷೇತ್ರವೆಂದರೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಾಲು ರಾಮೇಶ್ವರ . ಇದನ್ನು ಇಲ್ಲಿಯ “ಚಿಕ್ಕವಜ್ಜರ” ಶ್ರೀ ದಶರಥ ರಾಮೇಶ್ವರ ಕ್ಷೇತ್ರವನ್ನು “ದೊಡ್ಡವಜ್ಜರ” ಎಂದು ಕರೆಯುತ್ತಾರೆ.
ಬೆಂಗಳೂರಿನಿಂದ ಸುಮಾರು 200 ಕಿ.ಮೀ. ದೂರದಲ್ಲಿ ಹೊಸದುರ್ಗ ಸಮೀಪ (ಹೊನ್ನೇನಹಳ್ಳಿ ಮತ್ತು ನರಸೀಪುರ ಗ್ರಾಮಗಳ ಮಧ್ಯದಲ್ಲಿರುವ) ಹಾಲು ರಾಮೇಶ್ವರ ಕ್ಷೇತ್ರದಲ್ಲಿ, ಪುರಾಣ ಕಾಲದ ಗಂಗಕೊಳವೂ, ಶ್ರೀ ರಾಮನು ಪೂಜಿಸಿದ್ದನೆನ್ನಲಾದ ಪುರಾತನ ಶಿವಲಿಂಗವೂ ಹಾಗೂ ಕೆಲವು ಗುಡಿ, ಪುಷ್ಕರಣಿಗಳಿವೆ. ಇಲ್ಲಿಯ ಕೇಂದ್ರ ಬಿಂದುವಾದ ಗಂಗಾಕೊಳದಲ್ಲಿ (ನೆಲಮಟ್ಟದ ಪುಷ್ಕರಣಿ) ದಡದಲ್ಲಿ ಕುಳಿತು ಬಾಗಿ ಕೈಚಾಚಿದರೆ ನಿಲುಕುವಷ್ಟು ಮೇಲ್ಬಾಗದಲ್ಲಿ ನೀರು ಇರುತ್ತದೆ. ಆ ನೀರು ಹಾಲಿನಂತೆ ಬಿಳುಪಾಗಿದ್ದು, ಕೊಳದ ತಳದಲ್ಲಿನ ಒರತೆಯಿಂದ ಉಕ್ಕಿ ಬರುತ್ತಿರುತ್ತದೆ. ಹಾಗೆ ಬರುವಾಗ ಭಕ್ತರು ಬೇಡಿದ ಫಲಗಳನ್ನು ಹೊತ್ತು ತರುತ್ತದೆ. ಈ ಗಂಗಾಕೊಳದ ಜಲವು ಕಾಣಿಯಿಂದ ಬರುವ ತೀರ್ಥವೆಂದು ಪೂರ್ವಿಕರ ನಂಬಿಕೆ.
ಈ ಕ್ಷೇತ್ರದ ಐತಿಹ್ಯ
ಪ್ರಾಚೀನ ಕಾಲದಲ್ಲಿ, ಈ ಪ್ರದೇಶವು ದಟ್ಟವಾದ ಅರಣ್ಯವಾಗಿತ್ತು. ಈಗಿನ ದೊಡ್ಡ ಘಟ್ಟದಿಂದ ವೇದಾವತಿ ನದಿ ಹರಿಯುವ ಕೆಲ್ಲೋಡಿನವರೆಗೂ ಗೂಂಡಾರಣ್ಯವೇ ಇದ್ದಿತು. ಋಷಿಗಳೊಬ್ಬರು ತಮ್ಮ ಪತ್ನಿಯೊಂದಿಗೆ ರಾಮೇಶ್ವರನ ಆರಾದನೆಗಾಗಿ ಕಾಶಿಯಿಂದ ಇತ್ತ ಬರುತ್ತಾರೆ. ಮಾರ್ಗ ಮಧ್ಯದಲ್ಲಿನದಿಯೊಂದರಲ್ಲಿ ಋಷಿಯ ಪತ್ನಿಯು ಸ್ನಾನ ಮಾಡಿ ಗಂಗೆಗೆ ನಮಸ್ಕಾರ ಮಾಡುವಾಗ ಗಂಗಾದೇವಿ ಪ್ರತ್ಯಕ್ಷಳಾಗಿ ಈಕೆಯು ಕೈಗಳಲ್ಲಿದ್ದ ಕೈಗಡಗವನ್ನು "ಬಾಗಿನ"ವನ್ನಾಗಿ ತನಗೆ ನೀಡಬೇಕೆಂದು ತಿಳಿಸುತ್ತಾಳೆ. ಆ ಸಂಧರ್ಭದಲ್ಲಿ ಋಷಿಯು ಕಾಡಿನಲ್ಲಿ ತಪೋನಿರತರಾಗಿರುತ್ತಾನೆ. ಅದರಂತೆ ಋಷಿಪತ್ನಿ "ಸುದತಿ"ಯು ಗಂಗೆಗೆ ಬಾಗಿನ ಅರ್ಪಿಸುತ್ತಾಳೆ. ಗಂಗಾದೇವಿ ಇವಳನ್ನು ಆರ್ಶೀವದಿಸಿ ಮಾಯವಾಗುತ್ತಾಳೆ.
ಆಶ್ರಮ್ಕಕೆ ಬಂದ ಋಷಿಯು ಪತ್ನಿಯನ್ನು “ಕೈಕಡಗಗಳೇಕೆ ಕಾಣಿಸುತ್ತಿಲ್ಲ ? ಏನಾದವು ?” ಎಂದು ಕೇಳುತ್ತಾನೆ. ಪತ್ನಿಯು ನಿರುತ್ತರಳಾದಾಗ, ಋಷಿಯು ತಾನು ಹಾಗೇ ಕೇಳಬಾರದಿತ್ತೆನಿಸಿ ಮೌನವಹಿಸಿ ತಪೋನಿರತನಾಗುತ್ತಾನೆ. ಆದರೆ ಗಂಗಾದೇವಿಯು ತಾನು ಪ್ರತ್ಯಕ್ಷನಾಗಿದ್ದ ಸಂಗತಿಯನ್ನು ಯಾರಿಗೂ ಹೆಳಬಾರದೆಂದು ಭಾಷೆ ತೆಗೆದುಕೊಂಡಿರುತ್ತಾಳೆ. ಪತಿಗೆ ಹೇಳದಿದ್ದರೆ ದ್ರೋಹವಾಗುತ್ತದೆ: ಹೇಳಿದರೆ ಗಂಗೆಗೆ ನೀಡಿದ ಭಾಷೆಗೆ ತಪ್ಪಿದಂತಾಗುತ್ತದೆ ಎಂದು ದುಃಖಿತಳಾದ ಸುದತಿಯೂ ಒಂದು ಹುತ್ತದೊಳಗಿನಿಂದ ಹಾಲಿನಷ್ಟು ಶುಭ್ರ ಹಾಲಿನಷ್ಟು ಶುಭ್ರ ಬಿಳಿ ಜಲಧಾರೆ ಉಕ್ಕಿ ಹರಿಯಲಾರಂಭಿಸಿತು. ಸುದತಿ ಒಡನೆಯೆ ತನ್ನ ಕೈಗಳನ್ನು ಹೊರತೆಗೆದು ನೋಡಿಕೊಳ್ಳುತ್ತಾಳೆ. ಗಂಗಾದೇವಿಗೆ ತಾನು ಈ ಮೊದಲು "ಭಾಗಿನ" ನೀಡಿದ್ದ ಕಡಗಗಳು ಕೈಗಳಲ್ಲಿ ಶೋಭಿಸುತ್ತಿದೆ. ಅತ್ತ ತಪೋನಿರತನಾಗಿದ್ದ ಋಷಿಗೆ ತನ್ನ ದಿವ್ಯಧೃಷ್ಟಿಗೆ ಇದೆಲ್ಲವೂ ಗೋಚರವಾಗಿ, ಸ್ವಲ್ಪ ಸಮಯಕ್ಕೆ ಋಷಿಗಳು ಸುದತಿ ಇದ್ದ ಸ್ಥಳಕ್ಕೆ ಬಂದರು. ಅದೇ ಸಮಯಕ್ಕೆ ಗಂಗೆಯು ಪ್ರತ್ಯಕ್ಷಳಾಗಿ "ನಿಮ್ಮ ಕೋರಿಕೆ ಏನು?" ಎಂದು ಕೇಳಿದಳು. ಅದಕ್ಕೆ ಋಷಿದಂಪತಿಗಳು "ಸರ್ವ ಪಾಪಗಳನ್ನು ತೊಳೆಯುವ ನೀನು ಇಲ್ಲಿಯೇ ಸ್ಥಿರವಾಗಿ ನಿಂತು ಮುಂದೆಯೂ ಭಕ್ತರ ಅಭೀಷ್ಟೇಗಳನ್ನು ನೇರವೇರಿಸಬೇಕು. ಹಾಗೂ ಶ್ರೀರಾಮನಿಂದ ಆರಾಧಿಸಲ್ಪಟ್ಟ ಈಶ್ವರ ಲಿಂಗಕ್ಕೆ ಅರ್ಚನೆ ಮಾಡುವ ಸಂಕಲ್ಪ ಸಿಧ್ದಿಸಬೇಕು" ಎಂದು ಕೋರಿ ಧೀರ್ಘದಂಡ ನಮಸ್ಕಾರ ಮಾಡಿದರು. ಗಂಗೆಯು {ಹಾಗೆಯೇ ಆಗಲೀ, ತಥಾಸ್ತು{ ಎಂದು ಆರ್ಶೀವದಿಸಿ ಅದೃಶ್ಯಳಾದಳು.
ಆ ಹುತ್ತದಿಂದ ಗಂಗೆಯು ನಿರಂತರವಾಗಿ ಉಕ್ಕಿ ಹರಿಯತೊಡಗಿತು. ಶ್ರೀರಾಮನು ಪೂಜಿಸಿದ್ದೆನ್ನಲಾದ ಈಶ್ವರಲಿಂಗವೂ ಅಲ್ಲಿಯೇ (ಸಮೀಪದಲ್ಲಿ) ಋಷಿಗಳಿಗೆ ಗೋಚರವಾಯಿತು. ಋಷಿಗಳು ಶುಭಮುಹೂರ್ತದಲ್ಲಿ ಆ ಶಿವಲಿಂಗವನ್ನು ಪುನರ್ ಪ್ರತಿಷ್ಟಾಪಿಸಿ ಹುತ್ತವಿದ್ದ ಸ್ಥಳದಲ್ಲಿ ಎರಡು ಹೊಂಡಗಳನ್ನು ನಿರ್ಮಿಸಿ, ತನ್ನ ಕಮಂಡಲದಲ್ಲಿ ಶೇಖರಿಸಿ ತಂದಿದ್ದ ಯಮುನೆ ಮತ್ತು ಸರಸ್ವತಿಯನ್ನು ಆವಾಹನೆ ಮಾಡಿದರು. ಕಾಲಾನುಕ್ರಮದಲ್ಲಿ ಕ್ಷೇತ್ರದಲ್ಲಿ ಗಂಗಮ್ಮನ ಕೊಳಗಳಿಗೆ ಎರಡು ಪುಟ್ಟ ಗುಡಿಗಳು ರಾಮಲಿಂಗಕ್ಕೆ ದೇವಾಲಯವೂ, ರಾಮನ ವಿಗ್ರಹವಿರುವ ಒಂದು ಗುಡಿಯೂ, ಇತರೆ ಶಿವಲಿಂಗಗಳು-ನಂದಿಗಳ ಪ್ರತಿಷ್ಟಾಪನೆ ಮಂಟಪಗಳು, ಗಂಗಾಕೊಳದಿಂದ ಹೊರಬರುವ ಹೆಚ್ಚುವರಿ ತೀರ್ಥವು ಹರಿಯಲು ಇನ್ನೆರಡು ಪುಷ್ಕರಿಣಿಗಳು ನಿರ್ಮಾಣವಾದವು.
ನಾಡಿನ ನಾನಾ ಭಾಗಗಳಿಂದ ಭಕ್ತರನ್ನೂ, ಪ್ರವಾಸಿಗರನ್ನು ಆಕರ್ಷಿಸುವ ಈ ಕ್ಷೇತ್ರವು ಯಾವುದೇ ಸುವ್ಯಸ್ಥಿತ ಸೌಕರ್ಯಗಳಿಲ್ಲದೇ, ಸರ್ಕಾರದ ದಿವ್ಯ ನಿರ್ಲಕ್ಷ್ಯತೆಗೆ ಒಳಗಾಗಿದೆ. ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿದ್ದ ಹಸಿರು ಕಲ್ಲಿನ ಅಪರೂಪದ ನಂದಿ ವಿಗ್ರಹ ಕಾಣೆಯಾಗಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
(ಆಧಾರ: “ಹೊಸದುರ್ಗ ಸೀಮೆ ಜಾನಪದ”– ಬಾಗೂರು ನಾಗರಾಜಪ್ಪ)
|