ದಶರಥ ರಾಮೇಶ್ವರ ಕ್ಷೇತ್ರ
ರಾಮಾಯಣ ಕಾಲದ ಕೆಲವೇ ಪುಣ್ಯಕ್ಷೇತ್ರಗಳಲ್ಲಿ ದಶರಥರಾಮೇಶ್ವರವೂ ಒಂದೆನ್ನಲಾಗಿದೆ. ಜನರು ಇದನ್ನು ‘ದೊಡ್ಡವಜ್ಜರ’ ಎನ್ನುತ್ತಾರೆ. ಜಾನಪದ ತ್ರಿಪದಿಗಳಲ್ಲಿ ‘.....ದಸರತ ರಾಮಯನ್ನ ಹೊಳೆ’ ಎನ್ನಲಾಗಿದೆ. ದಶರಥ ರಾಮೇಶ್ವರ ದೇವರನ್ನು “ದಶರಥ ರಾಮೇಶ” ಎಂದಿರುವವರು. ಬುದ್ಹಾಳ್ (ಬೂದಿಹಾಳ್) ಕೋಟೆಯ ಗೊಲ್ಲ ಸಿರುಮನ ಕುರಿತು ಸಾಂಗತ್ಯದಲ್ಲಿ ಹಾಗೂ ಮತ್ತೋಡು-ನೇರಲಕೆರೆ ತಾಮ್ರ ಶಾಸನಗಳಲ್ಲಿ ಕ್ಷೇತ್ರದ ಬಗ್ಗೆ ಪ್ರಸ್ತಾಪವಿದೆ. ಅಲ್ಲದೇ, ಜನಜನಿತವಾಗಿರುವ ಅನೇಕ ದಂತಕಥೆಗಳು ಮತ್ತು ಐತಿಹ್ಯಗಳು ಇಂದಿಗೂ ಮನೆಮಾತಾಗಿವೆ.
ಪುರಾಣ ಕಥೆಯಲ್ಲಿ ಬರುವ ಶ್ರವಣಕುಮಾರನು ದಶರಥನ ಬಾಣದಿಂದ ಹತನಾದ ಸ್ಥಳವಿದು ಎನ್ನಲಾಗಿದೆ. ಪ್ರಾಚೀನ ಕಾಲದಲ್ಲಿ ಈ ಕ್ಷೇತ್ರವು, ದಟ್ಟವಾದ ಅರಣ್ಯಗಳಿಂದ ಸುತ್ತುವರಿಯಲ್ಪಟ್ಟಿದ್ದಿತು. ದಶರಥ ಮತ್ತು ರಾಮನಿಂದ ಪೂಜಿಸಲ್ಪಟ್ಟಿರುವ ಶಿವಲಿಂಗದಿಂದಾಗಿ ಈ ಕ್ಷೇತ್ರಕ್ಕೆ ‘ದಶರಥ ರಾಮ ಈಶ್ವರ’ ಎಂಬ ಹೆಸರು ಬಂದಿರಬೇಕು. ಪುಣ್ಯಕ್ಷೇತ್ರವೂ ಇದಾಗಿರುವುದರಿಂದ, ‘ವಜ್ಜರ’ ಕ್ಷೇತ್ರವೆಂದೂ ಪ್ರಖ್ಯಾತವಾಗಿದೆ. ಇದೇ ತಾಲ್ಲೂಕಿನಲ್ಲಿರುವ ಶ್ರೀ ಹಾಲು ರಾಮೇಶ್ವರ ತೀರ್ಥಕ್ಷೇತ್ರವನ್ನು ‘ಸಣ್ಣವಜ್ಜರ’ ಎಂದು, ಹಾಗೂ ಈ ಕ್ಷೇತ್ರವನ್ನು ‘ದೊಡ್ಡವಜ್ಜರ’ ಎಂದೂ ಕರೆಯುತ್ತಾರೆ. ‘ಗಿಳಿವಜ್ರ’, ‘ಕಡವೆಗೆರೆ ವಜ್ರ’ ಸಹ ಹೊಸದುರ್ಗ ತಾಲ್ಲೂಕಿನಲ್ಲಿಯೇ ಇದೆ.
(ಆಧಾರ: “ಹೊಸದುರ್ಗ ಸೀಮೆ ಜನಾಪದ”– ಬಾಗೂರು ನಾಗರಾಜಪ್ಪ)
|