ಹೊರಕೆರೆದೇವರಪುರದ ಶ್ರೀರಂಗನಾಥಸ್ವಾಮಿ ದೇವಾಲಯ
ಚಿತ್ರದುರ್ಗ – ಹೊಳಲ್ಕೆರೆ ಹೆದ್ದಾರಿಯಲ್ಲಿ ಚಿತ್ರಹಳ್ಳಿ ಗೇಟ್ ನಿಂದ ಹೊರಕೆರೆದೇವರಪುರಕ್ಕೆ ಹೋಗಬಹುದು. ಇಲ್ಲಿಯ ರಂಗನಾಥಸ್ವಾಮಿ ದೇವಾಲಯದಿಂದ ಈ ಊರು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ. ಕಲ್ಲಿನಿಂದ ಕಟ್ಟಲಾದ ಈ ಬೃಹತ್ ದೇವಾಲಯದ ಹೆಬ್ಬಾಗಿಲು ಐದು ಅಂತಸ್ತುಗಳಿಂದ ಕೂಡಿದ್ದು, ಸುರಕ್ಷಿತವಾಗಿದೆ. ಸುಂದರ ವಾಸ್ತುಶಿಲ್ಪದಿಂದ ಕೂಡಿದ, ಕಣ್ಮನ ಸೆಳೆಯುವ ಸುಮಾರು 70-80 ಕಂಬಗಳನ್ನು ಒಳಗೊಂಡ ಕಲಾತ್ಮಕ ಗೋಪುರ, ವಿಶಾಲವಾದ ಪ್ರಾಂಗಣ, ಸುಖನಾಸಿ, ನವರಂಗ, ಗರ್ಭಗುಡಿಗಳನ್ನು ಹೊಂದಿದೆ. ಕಂಬಗಳ ಮೇಲೆ ಸರಸ್ವತಿ, ದ್ವಾರಪಾಲಕರು, ನರ್ತನ ಚಿತ್ರಗಳು, ದೇವದೇವತೆಗಳು, ಹುಲಿ, ಸಿಂಹ, ನವಿಲು, ಆನೆ, ಕುದುರೆ, ಆಂಜನೇಯ, ಪಶುಪತಿ, ಲಿಂಗದ ಮೇಲೆ ಹಾಲು ಕರೆಯುವ ಗೋವು ಇನ್ನು ಮುಂತಾದ ಕೆತ್ತನೆಯನ್ನು ಕಾಣಬಹುದು.
ಈ ದೇವಾಲಯದ ಮುಖಮಂಟಪ ಇಡೀ ಜಿಲ್ಲೆಯಲ್ಲಿಯೇ ಮತ್ತೆಲ್ಲಿಯೂ ಇಲ್ಲ. ಗರ್ಭಗುಡಿಯಲ್ಲಿ ಹುತ್ತದ ಮೇಲೆ ಒಡಮೂಡುವ ರಂಗನಾಥಸ್ವಾಮಿ, ಮಧ್ಯ ರಂಗದಲ್ಲಿ ಲಕ್ಷ್ಮಿನರಸಿಂಹಸ್ವಾಮಿ, ಸುಖನಾಸಿಯಲ್ಲಿ ಬೃಹತ್ ರಂಗನಾಥಸ್ವಾಮಿ ಮಲಗಿದ್ದಾನೆ. ತಲೆಯ ಬಳಿಯಲ್ಲಿ ಕಾಳಿಂಗ, ಕಾಲಬಳಿಯಲ್ಲಿ ದೇವಿಯರಿದ್ದಾರೆ.
ದೇವಾಲಯದ ಪ್ರಾಂಗಣದ ಸುತ್ತಲೂ ಚಿಕ್ಕಚಿಕ್ಕ ದೇವಮಂದಿರಗಳಿವೆ. ಈ ದೇವಾಲಯವನ್ನು ಹಂತಹಂತವಾಗಿ ಮೂರು ಜನ ಪಾಳೆಯಗಾರರು ಕಟ್ಟಿಸಿದ್ದಾರೆಂದು, ಇದಕ್ಕೆ ಆಧಾರವಾಗಿ ಕಂಬಗಳ ಮೇಲೆ ಜೋಡಿ ಚಿತ್ರಗಳನ್ನು ತೋರಿಸುತ್ತಾರೆ. ಈ ದೇವಾಲಯ ನಿರ್ಮಾಣದ ಹಿಂದೆ ಹಲವಾರು ಜನಪದೀಯ ದಂತಕಥೆಗಳಿವೆ. ದೇವಾಲಯದ ಮುಂದೆ ನಾಲ್ಕು ದಿಕ್ಕಿನಲ್ಲಿಯೂ ನಾಲ್ಕು ಕಂಬಗಳ ಸುಂದರವಾದ ಕಲ್ಲುಮಂಟಪಗಳು, ಮಧ್ಯೆ ಎತ್ತರದ ಗೋಪುರ, ಒಂದು ಕಲ್ಲುಮಂಟಪ, ದೀಪಾಲೆ ಕಂಬ, ಏಕಶಿಲೆಯ ಬೃಹತ್ ಉಯ್ಯಾಲೆ ಕಂಬಗಳಿವೆ. ಜಾತ್ರೆಯಲ್ಲಿ ದೇವರುಗಳನ್ನು ಈ ಮಂಟಪದಲ್ಲಿ ಕೂರಿಸುತ್ತಾರೆ. ದೇವಾಲಯದ ಸಮೀಪದಲ್ಲೇ ಪ್ರಾಚೀನವಾದ ಬೃಹತ್ ಹೊಂಡವೊಂದಿದೆ.
|