ಬಯಲು ಗಣಪತಿ ದೇವಾಲಯ
ಇತಿಹಾಸ ಪ್ರಸಿದ್ಧವಾದ ಈ ಗಣಪತಿ ವಿಗ್ರಹವು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಅತ್ಯಂತ್ಯ ಎತ್ತರವಾದ (ಸುಮಾರು 9 ಅಡಿ ಎತ್ತರದ) ಗಣಪತಿ ವಿಗ್ರಹ ಎನ್ನಬಹುದು. ಬಯಲಿನಲ್ಲಿ ಈ ಗಣಪತಿ ನೆಲೆಸಿದ್ದರಿಂದ ಈ ಹೆಸರಾಗಿದ್ದು, ಈಗ ಸುಭದ್ರ ಕಟ್ಟಡದ ವ್ಯವಸ್ಥೆಯಾಗಿದೆ.
ಹಚ್ಚಡ ಹೊದ್ದು, ಕೊರಳಿಗೆ ಸರಮಾಲೆ ಧರಿಸಿರುವ ಒಂದು ಅಡಿ ಎತ್ತರದ ಮೂಷಿಕ ಲಾಂಛನ ಪೀಠದ ಮೇಲೆ ಕುಳಿತಿರುವ ಬೃಹತ್ ಗಣಪತಿಯನ್ನು ನೋಡಿದರೆ ಥಟ್ಟನೇ ಹಂಪಿಯ ಸಾಸಿವೆಕಾಳು ಗಣಪ ನೆನಪಾಗುತ್ತಾನೆ. ಈ ವಿಗ್ರಹದ ವಿಶೇಷವೆಂದರೆ ಇಲ್ಲಿಯ ಗಣಪ ಕಿರೀಟಾಧಾರಿಯಾಗಿದ್ದಾನೆ. ಹಿಂಭಾಗದಲ್ಲಿ ಅಲಂಕೃತವಾದ ಹೂ ಮುಡಿದ ಸುಂದರ ಜಡೆಯಿರುವುದರಿಂದ ಬಾಲಗಣಪ ಎಂತಲೂ ಕರೆಯುತ್ತಾರೆ. ತೂಗುದಲೆ ಗಣಪ ಎಂದು ಕರೆಯಲು ಮುಖ ಉದ್ದವಾಗಿರುವುದೇ ಕಾರಣ. ಗ್ರಾನೈಟ್ ಶಿಲೆಯಿಂದ ಕೆತ್ತಲಾದ ವಿಗ್ರಹ ಕಪ್ಪಗಿದೆ.
ಗಣಪತಿ ಪೀಠದ ಮೇಲೆ ‘ಕಾಮಗೇತಿ ಮೆದಕೇರಿನಾಯಕರ ಮೈದುನ ಗುಲ್ಯಪ್ಪನಾಯಕನ ಭಕ್ತಿ’ ಎಂದು ಒಂದು ಸಾಲಿನ ಶಾಸನವಿದೆ. ಕ್ರಿ.ಶ. 1570ರ ಸುಮಾರಿನಲ್ಲಿ ಗುಲ್ಯಪ್ಪನಾಯಕನು ಈ ಮೂರ್ತಿಯನ್ನು ಪ್ರತಿಷ್ಟಾಪಿಸಿರಬೇಕು. ಬಸ್ ನಿಲ್ದಾಣದಿಂದ ಸರ್ಕಲ್ ಗೆ ಬಂದರೆ ‘ಶ್ರೀ ವಿನಾಯಕ ದೇವಾಲಯಕ್ಕೆ ಹೋಗುವ ಮಾರ್ಗ’ ಎನ್ನುವ ಬರಹ ಕಾಣುತ್ತದೆ.
ಹೊಳಲ್ಕೆರೆ ಕಲ್ಲೇಶ್ವರ ದೇವಾಲಯ
ಹೊಳಲ್ಕೆರೆ ಊರಿನ ಕೊನೆಯಲ್ಲಿ ಕೆರೆಯ ಕೋಡಿ ಬಳಿ ಈ ಪುರಾತನ ಕಲ್ಲೇಶ್ವರ ದೇವಾಲಯವಿದೆ. ದೇವಾಲಯ ಸಾಧಾರಣ ಮಂಟಪ, ಹಾಗೂ ಗರ್ಭಗುಡಿಯಿಂದ ಕೂಡಿದ್ದು, ಚೋಳರ ಕಾಲದ ವಾಸ್ತುಶಿಲ್ಪದ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿರುವ ಈಶ್ವರ ಲಿಂಗವು ಸ್ವಯಂಭು ಕಲಿದೇವನೆಂದು ಪ್ರತೀತಿ. ಕ್ರಿ.ಶ. 1217 ರಲ್ಲಿ ಹೊಯ್ಸಳರ ಅರಸು ಅಣ್ಣಮರಸನು ಹೊಳಲ್ಕೆರೆಯನ್ನು ಆಳುತ್ತಿದ್ದನೆಂದು ಈ ಸ್ವಯಂಭು ಕಲಿದೇವನಿಗೆ ‘ಕೋಡಿಹಳ್ಳಿ’ಯನ್ನು ದತ್ತಿ ಬಿಟ್ಟಿದನೆಂದು ತಿಳಿದು ಬರುತ್ತದೆ.
ಶ್ರೀ ವೀರಭದ್ರ ದೇವಾಲಯ
ಶ್ರೀ ವಿನಾಯಕ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೊಯ್ಸಳರ ವಾಸ್ತುಶಿಲ್ಪದಿಂದ ಕೂಡಿದ ಈ ದೇವಾಲಯವು ಕಾಣುತ್ತದೆ. ಹೊಯ್ಸಳರ ಸಾಮ್ರಾಜ್ಯದ ‘ಅಣ್ಣಮರಸ’ನು ಕ್ರಿ.ಶ. 1217-18 ಹೊಳಲ್ಕೆರೆಯನ್ನು ಆಳುತ್ತಿರುವಾಗ ಈ ದೇವಾಲಯವನ್ನು ಕಟ್ಟಿಸಿದನು. ಈ ದೇವಾಲಯವು ತ್ರಿಕುಟಾಚಲ ಶೈಲಿಯಲ್ಲಿದೆ.
ದೇವಾಲಯದ ಸುತ್ತ ಪೌಳಿ ಗೋಡೆ ಇದೆ. ದೇವಾಲಯಕ್ಕೆ ಸುಂದರ ದ್ವಾರಮಂಟಪವಿದ್ದು, ದೇವಾಲಯದ ಪ್ರವೇಶದ್ವಾರದಲ್ಲಿ ಎರಡು ಕಲ್ಲಿನ ಆನೆಗಳಿವೆ. ಮಧ್ಯರಂಗದಲ್ಲಿ ನಾಲ್ಕು ಸ್ತಂಭಗಳಿದ್ದು, ಮೂರು ಕಡೆ ಗರ್ಭಗುಡಿಯಿದ್ದು, ಬಲಗಡೆ ಮಂದಿರದಲ್ಲಿ ಈಶ್ವರ ಹಾಗೂ ಚಿಕ್ಕನಂದಿಗಳಿವೆ. ಎಡಗಡೆಯ ಮಂದಿರದಲ್ಲಿ ಸುಮಾರು 4 ಅಡಿ ಎತ್ತರದ ಸುಂದರ ಕೆತ್ತನೆಯ ಅಲಂಕಾರದಿಂದ ಕೂಡಿದ ನಂದಿ ವಿಗ್ರಹವಿದೆ. ಮಧ್ಯವಿರುವ ಗರ್ಭಗುಡಿಯ ರುದ್ರಗಂಭೀರ ಮುಖಭಾವದ ಶ್ರೀ ವೀರಭದ್ರಸ್ವಾಮಿ ವಿಗ್ರಹವಿದೆ. ಮಧ್ಯರಂಗದ ಕಂಬಗಳ ಮೇಲೆ ಗಣಪತಿ, ಬೇಡರ ಕಣ್ಣಪ್ಪ, ಬ್ರಹ್ಮನ ವಿಗ್ರಹಗಳಿವೆ. ಇಲ್ಲಿ ಬಸವ ಜಯಂತಿಯಂದು ಕೆಂಡೋತ್ಸವ ನಡೆಯುತ್ತದೆ.
|