|
|
||||||||||||||||||
![]() |
ಪ್ರೇಕ್ಷಣೀಯ ಸ್ಥಳಗಳು |
![]() |
||||||||||||||||
|
||||||||||||||||||
|
ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ (ರಾ.ಹೆ-4) ಮಾರ್ಗ ಮಧ್ಯದಲ್ಲಿ ಸಿಗುವ ಲಕ್ಕಮುತ್ತೇನಹಳ್ಳಿಯ ಬಲಭಾಗಕ್ಕೆ ಒಂದು ಮೈಲಯಷ್ಟು ದೂರದಲ್ಲಿರುವ ಗ್ರಾಮವೇ ನೀರ್ಥಡಿ. “ಗಾರ್ಗ್ಯ” ಮಹರ್ಷಿಯ ತಪೋಭೂಮಿ ಎಂಬ ನಂಬಿಕೆಯೂ ಇದೆ. ಇಲ್ಲಿಯ ಶ್ರೀ ರಂಗನಾಥಸ್ವಾಮಿ ದೇವಾಲಯವು ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದೆ. ಈ ದೇವಾಲಯದ ಮೂಲ ಸ್ಥಾಪನೆಯ ಬಗ್ಗೆ ಈ ಬಗ್ಗೆ ಯಾವುದೇ ದಾಖಲೆಗಳು ದೊರೆಯದಿದ್ದರೂ ಕ್ರಿ.ಶ. 1698ರಲ್ಲಿ ಚಿತ್ರದುರ್ಗದ ಪಾಳೆಯಗಾರರಾದ “ಬಿಚ್ಚುಗತ್ತಿ ಭರಮಣ್ಣನಾಯಕ” ನಿಂದ ಪುನರ್ ಪ್ರತಿಷ್ಟಾಪಿತ (ಕ್ರಿ.ಶ. 1634ರಲ್ಲಿ ಮೊಘಲರ ಕಾಲದಲ್ಲಿ ಮಲ್ಲಿಕಾಪುರ್ ದಾಳಿಯಿಂದ ಹಾನಿಗೊಳಗಾದ ದೇವಾಲಯವನ್ನು) ಮಾಡಿದ ಎನ್ನಲಾಗುವ ಶಾಸನವು ಪತ್ತೆಯಾಗಿದೆ. ಒಂದು ಅಭಿಪ್ರಾಯದಂತೆ ಹದಿನಾರನೆಯ ಶತಮಾನದಲ್ಲಿ ವಿಜಯನಗರದಿಂದ ವಲಸೆ ಬಂದ ವಿರುಪಾಕ್ಷ ಜೋಯಿಸರು ಈ ಸ್ಥಳದಲ್ಲಿ ನೆಲೆಸಿ ನೀರ್ಥಡಿ ಗ್ರಾಮವನ್ನು ಕಟ್ಟಿಸಿದರು ಎಂದು ತಿಳಿದು ಬಂದಿರುತ್ತದೆ. ಶ್ರೀ ರಂಗನಾಥ ದೇವಾಲಯವು ಕಲ್ಲಿನಿಂದ ಕಟ್ಟಲ್ಪಟ್ಟಿದ್ದು, ಒಳ ಆವರಣದ ಸುತ್ತಲೂ ಭದ್ರಗೋಡೆಯಿದ್ದ ಕುರುಹುಗಳಿವೆ. ಈ ದೇವಾಲಯವು ಚಾಲುಕ್ಯ, ಹೊಯ್ಸಳ ವಾಸ್ತುಶಿಲ್ಪ ಶೈಲಿಗಿಂತ ಭಿನ್ನವಾಗಿವೆ. ದೇವಾಲಯದ ಮುಂಭಾಗದಲ್ಲಿ ಎರಡು ವಿಶಾಲವಾದ ಜಗುಲಿಗಳಿವೆ. ಸುಂದರ ಕೆತ್ತನೆಯ ಕಂಬ ಆಧರಿಸಿ ನಿಂತ ಜಗುಲಿಯ ನಡುವೆ ದೇವಾಲಯಕ್ಕೆ ಪ್ರವೇಶಿಸುವ ಮುನ್ನ ಕುಸರಿ ಕಂಬಗಳ ಪ್ರವೇಶದ್ವಾರ ಸಿಗುತ್ತದೆ. ದೇವಾಲಯದ ಪ್ರವೇಶ ದ್ವಾರದ ಬಳಿ ಉಬ್ಬು ಶಿಲ್ಪಗಳಲ್ಲಿ ದ್ವಾರಪಾಲಕರ ಕೆತ್ತನೆ ತನ್ಮಯತೆಯಿಂದ ಕೂಡಿದೆ. ದೇವಾಲಯದ ಒಳಗೆ ಪ್ರವೇಶಿಸಿದರೆ ಎದುರಾಗುವುದು ನಾಲ್ಕು ಬೃಹತ್ ಕಂಬಗಳನ್ನು ಆಧರಿಸಿ ನಿಂತ ವಿಶಾಲವಾದ “ಅಂತರಾಳ” ಎಂದೇ ಕರೆಯಲಾಗುವ ಹಜಾರ. ಚೌಕಾಕೃತಿಯ ಸಿಂಹ-ಶಾರ್ದೂಲಗಳನ್ನು ಕೋನಗಳಲ್ಲಿ ಹೊಂದಿದ ಕಂಬಗಳ ನಾಲ್ಕು ಮುಖದ ಮೂರು ಹಂತಗಳಲ್ಲಿ ಉಬ್ಬುಶಿಲ್ಪದ ಕೆತ್ತನೆಯಿದೆ. ಬಳ್ಳಿಯಂತೆ ಬಳುಕುವ ಬಾಲೆಯರು ನಿರ್ಮಿಸಿದ ಮನಮೋಹಕ ವೃತ್ತ, ಶೇಷಶಯನಿಯಾದ ವಿಷ್ಣು, ಅವನ ನಾಭಿಯಿಂದ ಹೊರಟ ಕಮಲದಲ್ಲಿ ಬ್ರಹ್ಮ, ಕೂರ್ಮಾವತಾರಿ ವಿಷ್ಣು, ಕೃಷ್ಣನ ಬಾಲಲೀಲೆಗಳು, ವಿಶೇಷ ಕೆತ್ತನೆಯ ಗಣಪತಿ ಮುಂತಾದ ಶಿಲ್ಪಗಳು ವಿಶಿಷ್ಟವಾಗಿದೆ. ಕಂಬದ ಪಾರ್ಶ್ವದಲ್ಲಿ ಚೋಳ ಶೈಲಿಯ ಧರಿಸಿದ ರಾಜದಂಪತಿಗಳು ಕೈಮುಗಿದು ನಿಂತಿರುವ ಶಿಲ್ಪವಿದೆ. ಗರ್ಭಗುಡಿಯಲ್ಲಿ ಸುಮಾರು ಮೂರು ಅಡಿ ಎತ್ತರದ ನಿಂತ ಭಂಗಿಯ ಶ್ರೀ ರಂಗನಾಥಸ್ವಾಮಿ ಮೂರ್ತಿಯು, ಅದೇ ಕಪ್ಪುಕಲ್ಲಿನ ಕೆತ್ತನೆಯಲ್ಲಿ ಕುಳಿತ ಭಂಗಿಯಲ್ಲಿ ಲಕ್ಷ್ಮಿ ವಿಗ್ರಹವೂ ಗರ್ಭಗುಡಿಯ ಎಡಭಾಗದಲ್ಲಿದೆ. ಪ್ರಾಯಶಃ ಇವೆರಡೂ ಪುನರ್ ಪ್ರತಿಷ್ಟಾಪಿತ ವಿಗ್ರಹಗಳೇ ಇರಬೇಕು. ದೇವಾಲಯದ ವಾಸ್ತು ವಿನ್ಯಾಸ: ಸಾಮಾನ್ಯವಾಗಿ ಕರ್ನಾಟಕ ಪ್ರಮುಖ ಶೈಲಿಗಳಾದ ಹೊಯ್ಸಳ ಮತ್ತು ಚಾಲುಕ್ಯ ದೇವಾಲಯಗಳಲ್ಲಿ ನೆಲಮಟ್ಟದಿಂದ ಎತ್ತರದ ಪೀಠದ ಮೇಲೆ ಬೃಹತ್ ಕಂಬಗಳನ್ನು ಆಧರಿಸಿ ನವರಂಗ, ಸುಖನಾಸಿನೆ, ನೃತ್ಯ ಮಂಟಪಗಳನ್ನು ಹಾಯ್ದ ನಂತರವೇ ವಿಶಾಲವಾದ ಹಜಾರಕ್ಕೆ ಪ್ರವೇಶಿಸಲಾಗುತ್ತದೆ. ಗರ್ಭಗುಡಿ ಮುಂಭಾಗದ ಈ ಅಂತರಾಳವು ವಿಶಾಲವಾಗಿದ್ದು, ತನ್ನ ಪಾರ್ಶ್ವಗಳಲ್ಲಿ ಕಂಬಗಳನ್ನು ಹೊಂದಿರುತ್ತದೆ. ಆದರೆ ಮಧ್ಯದಲ್ಲಿ ಬೃಹತ್ ಕಂಬಗಳನ್ನು ನಿಲ್ಲಿಸಿರುವುದು ವಿರಳ. ಕರ್ನಾಟಕ ಪಾರಂಪರಿಕ ಶೈಲಿಗಿಂತ ಭಿನ್ನವಾಗಿ ಮಣ್ಣು, ಗಾರೆ, ಇಟ್ಟಿಗೆಗಳ ದೇವಾಲಯ ವಿಭಿನ್ನವಾದುದು ಎನಿಸುತ್ತದೆ. ನೀರ್ಥಡಿಯ ಶ್ರೀ ರಂಗನಾಥ ದೇವಾಲಯದ ಗರ್ಭಗೃಹದ ಬಲಭಾಗದಲ್ಲಿ ಮತ್ತೊಂದು ಪುಟ್ಟ ಕೋಣೆ ಇದೆ. ಕತ್ತಲೆಯೇ ತುಂಬಿರುವ ಮಣ್ಣು ಕೋಣೆಯಲ್ಲಿ ಅಚ್ಚರಿ ಮೂಡಿಸುವಂತೆ ಗೋಡೆಗೆ ಒರಗಿಸಿ ಸಾಲುಸಾಲಾಗಿ ಕೈಮುಗಿದು ಕೂತ ಕರಿಯ ವಿಗ್ರಹಗಳಿವೆ. ಸಾಮಾನ್ಯವಾಗಿ ಶ್ರೀ ವೈಷ್ಣವ ಪರಂಪರೆಯೊಂದಿಗೆ ಗುರುತಿಸಲ್ಪಡುವ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಾಮುಖ್ಯತೆ ಪಡೆದ ಈ ಸಂತರನ್ನು ಸ್ಥಳೀಯರೂ ಆಳ್ವಾರರೆಂದೇ ಕರೆದು ಸೂಚಿಸಿದ್ದಾರೆ. ಶೈವ ಪಂಥ ಪ್ರಾಬಲ್ಯವಿದ್ದ ಈ ನೆಲದಲ್ಲಿ ವೈಷ್ಣವ ಮತದ ಪ್ರಭಾವವು ಇತ್ತು ಎಂಬುದಕ್ಕೆ ಈ ದೇವಾಲಯವೇ ಸಾಕ್ಷಿ. |
|||||||||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
||||||||||||||||||