LITERATURE OF CHITRADURGA
ದಿನಾಂಕ:
 

 

ಚಿತ್ರದುರ್ಗ ಜಿಲ್ಲೆಯ ಜನಪದ ಸಾಹಿತ್ಯ

 ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ಚಿತ್ರದುರ್ಗ ಚರಿತ್ರೆಯನ್ನು ನಿರೂಪಿಸಿದವರ ಪೈಕಿ ಮೊದಲಿಗರೆಂದರೆ ಮೈಸೂರು ಬಿ.ಪುಟ್ಟಣ್ಣನವರ ಮಗ ಎಂ.ಮುದ್ದಣ್ಣ (ಎಂ.ವೀರಮುದ್ದಯ್ಯ). ಇವರು ರಚಿಸಿದ ಚಿತ್ರದುರ್ಗದ ಲಡಾಯಿ ಲಾವಣಿ ಪ್ರಕಟಗೊಂಡಿದ್ದು 1905ರಲ್ಲಿ. ಚಿತ್ರದುರ್ಗದ ಇತಿಹಾಸ ವಸ್ತುಗಳನ್ನು ಆಧರಿಸಿ ರಚನೆಯಾದ ಜಾನಪದ ಆಕರಗಳಲ್ಲಿ ಪ್ರಥಮ ಪ್ರಕಟಿತ ಕೃತಿಯೆಂದರೆ ಇದೇ. ಹುಲ್ಲೂರು ಶ್ರೀನಿವಾಸ ಜೋಯಿಸರಿಂದ ಈ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿನ ಕೆಲಸ ನಡೆಯಿತು. ಹಾಗೇ ನೋಡಿದರೆ ಚಿತ್ರದುರ್ಗ ಜಿಲ್ಲೆಯ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯವನ್ನು ಕೈಗೊಂಡವರಲ್ಲಿ ಜೋಯಿಸರೇ ಮೊದಲಿಗರೆನ್ನಬೇಕು.

 

ಅರವತ್ತರ ದಶಕದಲ್ಲಿ ಪಾಳೆಯಗಾರರ ಪದಗಳು (1965) ಎಂಬ  ಸಂಗ್ರಹಕೃತಿಯನ್ನು ಹೊರತಂದು ಕ.ರಾ.ಕೃ, 1975ರಲ್ಲಿ ಚಿತ್ರಕಲ್ಲು ಮದಕರಿ ಸಂಗ್ರಹವನ್ನು ಪ್ರಕಟಿಸಿದರು. ಆ ನಂತರ ಚಿತ್ರದುರ್ಗ ಚರಿತ್ರೆಗೆ ಸಂಭಂಧಿಸಿದ ಜನಪದ ಗೀತೆಗಳನ್ನೊಳಗೊಂಡ ಇಂಥ ಪ್ರತ್ಯೇಕ ಸಂಗ್ರಹಗಳು ಯಾರಿಂದಲೂ ಹೊರಬರಲಿಲ್ಲ. ಆದರೆ 1966 ರಿಂದ ಈಚೆಗೆ ಜೀ.ಶಂ.ಪರಮಶಿವಯ್ಯ, ಮತಿಘಟ್ಟ ಕೃಷ್ಣಮೂರ್ತಿ, ಜಿ.ಎಸ್.ದೀಕ್ಷೀತ್, ಕೃಷ್ಣಮೂರ್ತಿ ಹನೂರು, ಮೀರಾಸಾಬಿಹಳ್ಳಿ ಶಿವಣ್ಣ, ಬಾರೀಕೆರೆ ಕರಿಯಪ್ಪ, ಮೈಲನಹಳ್ಳಿ ರೇವಣ್ಣ, ಲಕ್ಷ್ಮಣ್ ತೆಲಗಾವಿ ಮೊದಲಾದವರು ಸಂಗ್ರಹಣೆಯೊಡನೆ ವಿಮರ್ಶನಾ ಪ್ರಬಂಧಗಳನ್ನು ಬರೆಯುವ ಮೂಲಕ ಜಾನಪದೀಯ ನೆಲೆಯ ಚಿತ್ರದುರ್ಗ ಚರಿತ್ರೆಗೆ ಹೊಸ ಆಯಾಮ ನೀಡಿದರು.

 

ಈ ಮೇಲಿನವರಂತೆಯೇ ಕೆಲವು ಲಾವಣಿಕಾರರು ತಮ್ಮ ಆಧುನಿಕ ರಚನೆಗಳಿಂದ ದುರ್ಗದ ಚರಿತ್ರೆಗೆ ಹೊಸ ಕಳೆಯನ್ನಿತ್ತರು. ಮೈಸೂರಿನ ಯಂ.ವೀರಮುದ್ದಣ್ಣನವರ ತರುವಾಯ ನಲವತ್ತರ ದಶಕದಿಂದೀಚೆಗೆ (1947ರ ನಂತರ) ಕಾಣಿಸಿಕೊಂಡ ಪ್ರಮುಖ ಲಾವಣಿ ರಚನೆಕಾರರೆಂದರೆ ಲಾವಣಿ ಬಸವರಾಜ್, ಬಿ.ನೀಲಕಂಠಯ್ಯ, ಸಿ.ರಂಗಯ್ಯ, ಜಿ.ಎಸ್.ಗುಂಡಪ್ಪ, ಕೆ.ವಿ.ಮಂಜುನಾಥರಾವ್, ಮಾ.ನಂ.ನಂಜಪ್ಪ ಹಾಗೂ ಎಸ್.ಕೆ.ಗೋವಿಂದಪ್ಪ, ಹಿರಿಯ ಸ್ವಾತಂತ್ರ್ಯ ಯೋಧ ಗೊರಪ್ಪಳ ಪುಟ್ಟಪ್ಪ (ಲಾವಣಿ ಪುಟ್ಟಪ್ಪ), ಈಗ ದಿವಂಗತರಾಗಿರುವ ಕೋಟೆ ಓಬಯ್ಯ ಹಾಗೂ ಇವರ ಶಿಷ್ಯ ಬೆಂಕಿ ತಿಮ್ಮಯ್ಯ, ಹಾಗೂ ಮೇಟಿಕುರ್ಕೆ ರಂಗಪ್ಪ ಮೊದಲಾದವರು ದುರ್ಗದ ಲಾವಣಿಗಳನ್ನು ಹಾಡಿ ಜನರನ್ನ ಹುರಿದುಂಬಿಸುತ್ತಿದ್ದರು.

 

ಜಿಲ್ಲೆಯ ಜಾನಪದ ಕುರಿತು ಸಮೀಕ್ಷಾ ಬರಹಗಳನ್ನು ಪ್ರಕಟಿಸಿದವರಲ್ಲಿ ತೀ.ನಂ.ಶಂಕರನಾರಾಯಣ, ಎಂ.ಜಿ.ಈಶ್ವರಪ್ಪ, ಕೃಷ್ಣಮೂರ್ತಿ ಹನೂರು, ಡಾ||ಮೀರಾಸಾಬಿಹಳ್ಳಿ ಶಿವಣ್ಣ, ಮೈಲನಹಳ್ಳಿ ರೇವಣ್ಣ, ಮೊದಲಾದವರು ಮುಖ್ಯರೆನಿಸುತ್ತಾರೆ. ಕೃಷ್ಣಮೂರ್ತಿ ಹನೂರು ಸಂಗ್ರಹಿಸಿದ ಕತ್ತಲದಾರಿ ದೂರ (1981), ಹಾಗೂ ಜನಪದ ವೀರಗೀತೆಗಳು (1987), ಮೈಲನಹಳ್ಳಿ ರೇವಣ್ಣ ಸಂಗ್ರಹಿಸಿದ ಚಿತ್ರದುರ್ಗದ ಸುತ್ತಿನ ಜನಪದ ಕಾವ್ಯಗಳು (1984), ಎ.ಎಸ್.ಪ್ರಭಾಕರ್ ಸಂಗ್ರಹಿಸಿದ ಪಾಲಮ್ಮ ಮತ್ತು ಸಂಗಡಿಗರು ಹಾಡಿದ ಮ್ಯಾಸಬೇಡರ ಕಥನಗಳು (1999), ಮೊದಲಾದವು ಚಿತ್ರದುರ್ಗದ ಇತಿಹಾಸ ಧೃಷ್ಟಿಯಿಂದ ಅಮೂಲ್ಯ ಸಂಗ್ರಹಗಳು. ಜನಪದ ಕಥಾಸಂಗ್ರಹಗಳ ಮಟ್ಟಿಗೆ, ಕೃಷ್ಣಮೂರ್ತಿ ಹನೂರು ಸಂಗ್ರಹಿಸಿದ ಲೀಲಾವತಿ-ಪದ್ಮಾವತಿ (1987), ಮೈಲನಹಳ್ಳಿ ರೇವಣ್ಣ ಸಂಗ್ರಹಿಸಿದ ಚಿತ್ರದುರ್ಗ ಸುತ್ತಿನ ಜನಪದ ಕಥೆಗಳು, ಜಿ.ವಿಶ್ವೇಶ್ವರಪ್ಪ ಸಂಗ್ರಹಿಸಿದ ಚಿತ್ರದುರ್ಗದ ಜಿಲ್ಲೆಯ ಜನಪದ ಕಥೆಗಳು (1983), ಹಾಗೂ ಕಲಮರಹಳ್ಳಿ ಮಲ್ಲಿಕಾರ್ಜುನ ಸಂಗ್ರಹಿಸಿದ ಕಲಮರಹಳ್ಳಿಯ ಕಥೆಗಳು (1986) ಪ್ರಮುಖ ಸಂಗ್ರಹಗಳು.


(ಆಧಾರ: ದುರುಗ ಜಾನಪದ ಡಾ||ಮೀರಾಸಾಬಿಹಳ್ಳಿ ಶಿವಣ್ಣ)

.....

© 2011 www.chitharadurga.com. Best fit for 1024 X 768 Resolution.