|
|
|||||||||||
![]() |
ಪ್ರಾತಃಸ್ಮರಣೀಯರು |
![]() |
|||||||||
|
|||||||||||
|
|
|||||||||||
“ನಾಟಕವೇ ನನ್ನ ಆಧ್ಯಾತ್ಮ, ನನ್ನ ಅತ್ಯಂತ್ಯ ಕ್ರಿಯಾಶೀಲತೆಯೇ ನಾಟಕ ನಿರ್ದೇಶನ” ಎನ್ನುತ್ತಿದ್ದ ದಿ||ಸಿ.ಜಿ.ಕೆ. ರವರು 1950ರಲ್ಲಿ ಮಂಡ್ಯದಲ್ಲಿ ಜನಿಸಿದರು. ಇವರು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ‘ಸಮುದಾಯ’ ತಂಡದ ಸ್ಥಾಪಕ ಕಾರ್ಯದರ್ಶಿಯಾಗಿ ಹಲವಾರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ರಂಗಮಾಧ್ಯಮದ ಮೂಲಕ ಅನೇಕ ಅನಕ್ಷರಸ್ಥರಿಗೆ ತಿಳುವಳಿಕೆ ನೀಡಿದ್ದಾರೆ. ರಂಗಭೂಮಿಗೆ ಸಂಭಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಾರಂಭವಾದ ಥಿಯೇಟರ್ ಗಿಲ್ಡ್ ನ ಕಾರ್ಯದರ್ಶಿಯಾಗಿ, ರಂಗಭೂಮಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ಕಾರ್ಯದರ್ಶಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಅಪೂರ್ವ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ‘ಬೆಲ್ಟಿ’, ‘ಸೈಕ್ಲೋನ್’, ‘ಪಂಚತಾರಾ’, ‘ಪ್ಲೇ ಮೇ ಡೇ’, ‘ಭಾರತ್ ದರ್ಶನ್’, ‘ಅಲ್ಲೇ ಇದ್ದವರು’ ಮೊದಲಾದ ನಾಟಕಗಳನ್ನು ರಚಿಸಿರುವುದಲ್ಲದೇ ಶ್ರೀ ದೇವನೂರು ಮಹಾದೇವ ಅವರ ಸಣ್ಣಕಥೆ ‘ಒಡಲಾಳ’ ಹಾಗೂ ಯಶವಂತ ಚಿತ್ತಾಲರ ಸಣ್ಣಕಥೆ ‘ಅಬೋಲಿನಾ’ವನ್ನು ನಾಟಕಕ್ಕೆ ಅಳವಡಿಸಿದ್ದಾರೆ. ಈ ಎಲ್ಲಾ ನಾಟಕಗಳನ್ನು ಶ್ರೀಯುತರು ಸ್ವತಃ ನಿರ್ದೇಶಿಸಿದ ಹೆಗ್ಗಳಿಕೆಗೆ ಪಾತ್ರರು. ‘ಕುಸುಮಬಾಲೆ’, ‘ಮಹಾಚೈತ್ರ’, ‘ತಬರನ ಕಥೆ’, ‘ತುಘಲಕ್’ ಮೊದಲಾದವುಗಳನ್ನು ಶ್ರೀ ಸಿ.ಜಿ.ಕೆ. ರವರು ನಿರ್ದೇಶಿಸಿದ ನಾಟಕಗಳು. ಶ್ರೀ ಸಿ.ಜಿ.ಕೃಷ್ಣಸ್ವಾಮಿಯವರು 1992ರ ರಾಷ್ಟ್ರಪತಿ ಪ್ರಶಸ್ತಿ ಉತ್ಸವಕ್ಕಾಗಿ ಕೇಂದ್ರ ನಾಟಕ ಅಕಾಡೆಮಿ ತಾಂತ್ರಿಕ ಸಲಹೆಗಾರರಾಗಿ, ದೂರದರ್ಶನ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಹಿರಿಮೆಗೆ ಪಾತ್ರರಾದ ಇವರಿಗೆ 1990ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅನೇಕ ನಟ-ನಟಿಯರನ್ನು ರೂಪಿಸಿದ ಹಾಗೂ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿದ ಬಹುಮುಖ ‘ಏಕಲವ್ಯ’ ಪ್ರತಿಭೆಯಾದಂತಹ ಸಿ.ಜಿ.ಕೆ.ಯವರು ದಿನಾಂಕ: 11-01-2006 ರಂದು ಬುಧವಾರ ಸಾಣೇಹಳ್ಳಿಯಲ್ಲಿ ಇಹಲೋಕದ ‘ರಂಗಭೂಮಿ’ಯಿಂದ ನಿರ್ಗಮಿಸಿದರು. (ಶ್ರೀ ಸಿ.ಜಿ.ಕೆ.ಯವರ ಕುರಿತು ಮಾಹಿತಿ ಒದಗಿಸಿದ ರಂಗಕರ್ಮಿಗಳಾದ ಶ್ರೀ ಪಿ.ತಿಪ್ಪೇಸ್ವಾಮಿ ರವರಿಗೆ ವಂದನೆಗಳು) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||