ಬಿಚ್ಚುಗತ್ತಿ ಭರಮಣ್ಣನಾಯಕ
ದಳವಾಯಿ ಮುದ್ದಣ್ಣ ಮತ್ತು ಅವನ ಸಂಗಡಿಗರ ವಿರುದ್ಧವಾಗಿ ದಳವಾಯಿ ಭರಮಪ್ಪನ ನೇತೃತ್ವದಲ್ಲಿ ಒಂದು ಗುಂಪು ರೂಪುಗೊಂಡಿತು. ಅವರ ಉಪಾಯದಿಂದ ಮುದ್ದಣ್ಣ ಮತ್ತು ಅವನ ಸಂಗಡಿಗರನ್ನು ಸೆರೆ ಹಿಡಿದು ಶಿರಚ್ಛೇದನ ಮಾಡಿದರು. ದಳವಾಯಿ ಭರಮಪ್ಪ ಮತ್ತಿತರರ ಪ್ರಯತ್ನದಿಂದ, ಬಿಳಿಚೋಡಿನಲ್ಲಿದ್ದ ದುರ್ಗದ ಅರಸು ಮನೆತನಕ್ಕೆ ಸೇರಿದ ಭರಮಣ್ಣನಾಯಕನನ್ನು ಅಲ್ಲಿಂದ ಕರೆತಂದು ಕ್ರಿ.ಶ. 1689ರಲ್ಲಿ ಪಟ್ಟ ಕಟ್ಟಲಾಯಿತು. ಬಿಚ್ಚುಗತ್ತಿ ಭರಮಣ್ಣನಾಯಕ ಎಂದು ಇತಿಹಾಸದಲ್ಲೇ ಅತ್ಯಂತ ಉಲ್ಲೇಖನೀಯ ಅರಸನೆನಿಸಿದ್ದಾನೆ.
ಇವನ ಆಳ್ವಿಕೆಯಲ್ಲಿ ದುರ್ಗದ ಸಂಸ್ಥಾನಕ್ಕೆ ಒಂದು ಬಗೆಯ ರಾಜಕೀಯ ಸ್ಥಿರತೆ ಮತ್ತು ಘನತೆ ಬಂದಿತೆಂದರೆ ತಪ್ಪಾಗಲಾರದು. ಇವನು ದೊರೆಯಾಗುವ ಮೊದಲಿದ್ದ ಆಂತರಿಕ ಅಶಾಂತಿ ಇವನು ಆಡಳಿತವನ್ನು ಕೈಗೆ ತೆಗೆದುಕೊಳ್ಳುತ್ತಲೇ ಅವೆಲ್ಲ ಅಡಗಿಹೋದವು. ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಗುಡೇಕೋಟೆ ಮೊದಲಾದ ಸುತ್ತಮುತ್ತಲ ಅರಸರು ಘರ್ಷಣೆಯ ಪ್ರಸಂಗಗಳನ್ನು ತರುತ್ತಿದ್ದರೂ ಅವರನ್ನು ಭರಮಣ್ಣನಾಯಕ ಯಶಸ್ವಿಯಾಗಿ ಎದುರಿಸಿ ಜಯಶೀಲನಾದನು. ಇದಷ್ಟೇ ಅಲ್ಲದೇ ಮರಾಠರು, ಸೀರ್ಯದ ಮೊಗಲ್ ಸುಬೇದಾರರು, ಇವರ ಪ್ರಾಬಲ್ಯ ಅರಿತು ಸಹಕರಿಸುತ್ತಾ ಬಂದರು. ಕಾಲನಂತರ ಕ್ರಿ.ಶ. 1721ರಲ್ಲಿ ಚಿತ್ರದುರ್ಗದ ಹುಲಿಯೊಂದು ಸ್ವರ್ಗಸ್ಥವಾಯಿತು. |