LEGENDS OF CHITRADURGA
ದಿನಾಂಕ:

ಹುಲ್ಲೂರು ಶ್ರೀನಿವಾಸ ಜೋಯಿಸರು

 

ಚಿತ್ರದುರ್ಗದ ಮಟ್ಟಿಗೆ ಹೇಳುವುದಾದರೇ, ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರು ಜೀವಂತ ವಸ್ತುಕೋಶ. ಇಲ್ಲಿ ಅವರು ನೋಡದ ವಸ್ತುವಿಲ್ಲ, ಕೇಳದ ಕತೆಯಿಲ್ಲ, ಕಾಣದ ಕಲ್ಲೊಂದು ಇಲ್ಲ. ಕೋಟೆಯ ಒಂದೊಂದು ಕಲ್ಲು ಚಿರಪರಿಚಿತ, ಆಪ್ತಮಿತ್ರ! ಅವರೊಂದಿಗೆ ಬೆಟ್ಟದ ಕೋಣೆಯಲ್ಲಿ ಅಡ್ಡಾಡಿದಾಗ, ಹಿಂದೆಂದೂ ಕಾಣದ ಸೌಂದರ್ಯ ಅಪೂರ್ವ ವೈಶಿಷ್ಟ್ಯ ಕಂಡು ಬರುತ್ತದೆ ಎಂತಲೇ ಅದೊಂದು ರಸಾನುಭವವಾಗುತ್ತದೆ.”

-         ತ.ರಾ.ಸು (20-03-1953)

 

 ಚಿತ್ರದುರ್ಗದ ಇತಿಹಾಸವೆಂದರೆ ಜೋಯಿಸರು, ಜೋಯಿಸರೆಂದರೆ ಚಿತ್ರದುರ್ಗದ ಇತಿಹಾಸ. ನಮ್ಮ ಚಿತ್ರದುರ್ಗದ ಇತಿಹಾಸಕ್ಕೆ ಬಂದಾಗ ಹುಲ್ಲೂರರ ಪ್ರಸ್ತಾಪವಿಲ್ಲದೇ ಅದರ ಬಗ್ಗೆ ಮಾತನಾಡುವುದು ಅಪಚಾರವೇ ಸರಿ. ವೃತ್ತಿಯಿಂದ ವಕೀಲರಾಗಿದ್ದುಕೊಂಡು, ಅತ್ತ ಸಂಶೋಧಕರಾಗಿಯೂ, ಸ್ವಾತಂತ್ರ್ಯ ಹೋರಾಟಗಾರರಾಗಿಯೂ, ಕೇವಲ ಚಿತ್ರದುರ್ಗವಷ್ಟೇ ಅಲ್ಲ. ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಮಹನೀಯರಲ್ಲೊಬ್ಬರಾಗಿದ್ದಾರೆ.

 

 ಜೋಯಿಸರ ಪೂರ್ವಿಕರು ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಮೀಪದ ಅಂಬಳಿ ಎಂಬ ಗ್ರಾಮದಲ್ಲಿ ಅರ್ಚಕರಾಗಿದ್ದರು. ಅಲ್ಲಿ ಜೀವನ ನಡೆಸುವುದು ದುಸ್ತರವೆನಿಸಿದಾಗ, ಈಗ್ಗೆ ಸುಮಾರು 300 ವರ್ಷಗಳ ಹಿಂದೆ ಚಿತ್ರದುರ್ಗ ಸಮೀಪದ ಹುಲ್ಲೂರು ಗ್ರಾಮಕ್ಕೆ ಬಂದು ನೆಲೆಸಿದರು. ಹೀಗಾಗಿ ಹುಲ್ಲೂರು ಎನ್ನುವುದು ಇವರ ಮನೆತನದ ಹೆಸರಾಗಿ ಬಂದಿದೆ. 1892ರ ಮಾರ್ಚ್ 29ರ ಮಂಗಳವಾರ ಯುಗಾದಿ ಹಬ್ಬದ ದಿನ ಪಾಂಡುರಂಗ ಜೋಯಿಸರು ಮತ್ತು ಪಾರ್ವತಮ್ಮ ದಂಪತಿಗಳ ಎರಡನೇ ಪುತ್ರನಾಗಿ ಶ್ರೀನಿವಾಸ ಜೋಯಿಸರು ಚಿತ್ರದುರ್ಗದಲ್ಲಿ ಜನ್ಮ ತಾಳಿದರು. ಮೆಟ್ರಿಕ್ಯುಲೇಷನ್ ವರೆಗೆ ಓದಿದ ಜೋಯಿಸರು ಗುಮಾಸ್ತರಾಗಿ ಸರ್ಕಾರಿ ನೌಕರಿಗೆ ಸೇರಿದರು. ನಂತರ ಶಾಲಾ ಉಪಾಧ್ಯಾಯರಾಗಿ ಒಂದೆರಡು ವರ್ಷ ಕೆಲಸ ಮಾಡಿದರು. ಸ್ವತಂತ್ರ ಪ್ರವೃತ್ತಿಯ ಅವರಿಗೆ ಸರ್ಕಾರಿ ನೌಕರಿ ಹಿಡಿಸಲಿಲ್ಲ. ಉಪಾಧ್ಯಾಯ ವೃತ್ತಿಯಲ್ಲಿರುವಾಗಲೇ ಫ್ಲೀಡರ್ ಪರೀಕ್ಷೆಯನ್ನು ತೆಗೆದುಕೊಂಡು ಪಾಸು ಮಾಡಿದರು. ಆಮೇಲೆ ಒಂದು ದಿನ ಉಪಧ್ಯಾಯ ವೃತ್ತಿಗೆ ಶರಣು ಹೊಡೆದು ಸ್ವತಂತ್ರವಾದ ವಕೀಲಿ ವೃತ್ತಿಯನ್ನು ಕೈಗೊಂಡರು.

 ಜೋಯಿಸರು ವಕೀಲಿ ವೃತ್ತಿಯನ್ನು ಹಿಡಿದು ಇಪ್ಪತ್ತು ವರ್ಷಗಳಾದರೂ ಹೇಳಿಕೊಳ್ಳುವಂತಹ ಸಂಪಾದನೆಯನ್ನೇನೂ ಮಾಡಲಿಲ್ಲ. ಆ ಮಧ್ಯೆ ಇಡೀ ದೇಶದಲ್ಲಿ ಉಕ್ಕಿ ಹರಿಯುತ್ತಿದ್ದ ಸ್ವಾತಂತ್ರ್ಯ ಹೋರಾಟ ಅವರನ್ನೂ ಸೆಳೆಯಿತು. ಗಾಂಧೀಜಿಯವರ ವಿಚಾರಧಾರೆಯ ಪ್ರಭಾವಕ್ಕೆ ಒಳಗಾಗಿ ಅಪ್ಪಟ ಅನುಯಾಯಿಯಾದರು. ಖಾದಿಧಾರಿಯಾಗಿ ಅಪ್ಪಟ ಸ್ವದೇಶಿ ವಸ್ತುಗಳನ್ನು ಬಳಸುವ ವ್ರತ ತೊಟ್ಟರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ಎರಡು ಬಾರಿ ಜೈಲುವಾಸವನ್ನು ಅನುಭವಿಸಿದರು.

 

 1947ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಕಾಲಕ್ಕೆ ಕಾಂಗ್ರೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ ಕಾರಣ ಒಂದೂವರೆ ವರ್ಷಗಳ ಕಾಲ ಬೆಂಗಳೂರಿನ ಸೆಂಟ್ರಲ್ ಜೈಲ್ ನಲ್ಲಿ ಇಡಲಾಯಿತು. ಆಗ ದುರ್ಗದಲ್ಲಿ ಅವರ ಮನೆಯಲ್ಲಿದ್ದವರು ಕೇವಲ ಚಿಕ್ಕಮಕ್ಕಳು. ಒಮ್ಮೆ ಖಾಯಿಲೆಗೆ ತುತ್ತಾದ ಅವರಿಗೆ ಓಡಾಡಲಿಕ್ಕೂ ಆಗದಂತಹ ಪರಿಸ್ಥಿತಿ. ಇದೇ ಕಾರಣ ನೀಡಿ ಜೈಲಿನಿಂದ ಹೊರಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಪ್ರಸಂಗ ಇವರ ದೇಶಪ್ರೇಮಕ್ಕೆ ಒಂದು ನಿದರ್ಶನ.

 

 ಜೋಯಿಸರು ಸ್ವಲ್ಪ ಕಾಲದ ನಂತರ ಚೇತರಿಸಿಕೊಂಡು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದರೆ ಎಲ್ಲರೂ ಟೈಫಾಯ್ಡ್ ಆಗಿ ಮಲಗಿದ್ದರು. ಉಪಚಾರ ಪಡೆಯಬೇಕಿದ್ದ ಜೋಯಿಸರೇ ಎಲ್ಲರನ್ನೂ ಉಪಚರಿಸಬೇಕಾಯಿತು. ಇದರೊಂದಿಗೆ ಮತ್ತೊಂದು ದುರಂತವೆಂದರೆ ಈ ಕಾಯಿಲೆಯಿಂದಲೇ ಇವರ ಮಕ್ಕಳಾದ ಸುಶೀಲಮ್ಮ, ವಿದ್ಯಾರಣ್ಯ ಅಸುನೀಗಿದರು. ದುರಂತದ ನಡುವೆ ಅದೇ ಕಾಲದಲ್ಲಿ ಸಂಭವಿಸಿದ ಘೋರ ಬರಗಾಲ. ಇವರ ಮನ ಕಲುಕಿತು. ಜೋಯಿಸರೇ ಸ್ವತಃ ಹಳ್ಳಿ ಹಳ್ಳಿ ಸುತ್ತಿ ಗಂಜಿ ಕೇಂದ್ರ ತೆರೆಯಲು ಶಕ್ತಿ ಮೀರಿ ಶ್ರಮಿಸಿದರು.

 

 ಇತಿಹಾಸಕಾರ ಹಾಗೂ ಸಂಶೋಧಕರಾಗಿ ಹುಲ್ಲೂರರು:

            ಚಿತ್ರದುರ್ಗ ಇತಿಹಾಸದ ಬಗ್ಗೆ ಅಧ್ಯಯನ ಕೈಗೊಳ್ಳಲು ಅವರಿಗೆ ಸ್ಪೂರ್ತಿ ಚಿತ್ರದುರ್ಗದವರೇ ಆದ ಡಾ||ಪಿ.ಕೃಷ್ಣರಾವ್ ಎಂಬುವವರು. ವಿದ್ಯಾರ್ಥಿಯಾಗಿದ್ದಾಗಲೇ ಪ್ರಬುದ್ಧ ಕರ್ನಾಟಕದಲ್ಲಿ (1901) ಪ್ರಕಟಿಸಿದ್ದ ಚಿತ್ರದುರ್ಗದ ಬೆಟ್ಟ ಮತ್ತು 1921ರಲ್ಲಿ ಪ್ರಕಟಿಸಿದ್ದ ನಾಯಕ ಸಾಮ್ರಾಜ್ಯ ಲೇಖನಗಳು ಬರೆದಿದ್ದರು. ಮುಂದೆ ಸುಮಾರು ಇನ್ನೂರು ಲೇಖನಗಳನ್ನು ಹತ್ತು ಪುಸ್ತಕಗಳನ್ನು ಬರೆದರು. ಇವುಗಳಲ್ಲಿ ಗಂಡುಗಲಿ ಕುಮಾರರಾಮ, ಕನ್ನಡ ಕಲಿಸಿರುಮನ ಚರಿತೆ (ಸಿರುಮ ನೃಪಾಲ), ಮಯೂರಶರ್ಮ ಮತ್ತು ಇತರ ಕಥೆಗಳು, ನಾಡಕತೆಗಳು, ಹುಳಿಯಾರು ಮಾರಭೂಪಾಲ, ಸಳ, ಕಪೋತವಾಕ್ಯ ಇವು ಜನಪ್ರಿಯ ಪುಸ್ತಕಗಳಾಗಿವೆ. ಚಿತ್ರದುರ್ಗದ ಬಖೈರು ಎಂಬುದು ಅವರು ಸಂಪಾದಿಸಿರುವ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿನಾಯಕನ ಇತಿಹಾಸ ಕುರಿತು ಒಂದು ಪ್ರಮುಖ ಆಕರ ಕೃತಿ. ಭರಮಣ್ಣನಾಯಕನ ಸಮರ ವಿಜಯ, ಹಿರೇಮೆದಕೇರಿನಾಯಕನ ತಾರಾವಳಿ, ಮದಕರಿ ರಾಜೇಂದ್ರ ದಂಡಕ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದುರ್ಗದ ಪಾಳೆಯಗಾರರಿಗೆ ಸಂಭಂಧಿಸಿದ ಅನೇಕ ಕಾಗದ ಪತ್ರಗಳನ್ನು, ಹಸ್ತಪ್ರತಿ ದಾಖಲೆಗಳನ್ನೂ ಅಭ್ಯಸಿಸಿ ಅನೇಕ ಲೇಖನಗಳನ್ನು ಬರೆದಿದ್ದಾರೆ. “ಐತಿಹಾಸಿಕ ಪತ್ರವ್ಯವಹಾರಗಳು, ಚಿತ್ರದುರ್ಗ ಪತನ, ಚಿತ್ರದುರ್ಗ ಪತನಾನಂತರ, ಮಾಯಕೊಂಡದ ಮುತ್ತಿಗೆ, ರಸಸಿದ್ದರು ಹಾಗೂ ಚಿತ್ರದುರ್ಗದ ಏಳು ಸುತ್ತಿನ ಕೋಟೆ ಮುಂತಾದ ಲೇಖನಗಳನ್ನು ಬರೆದಿದ್ದಾರೆ.

 

         ಜೋಯಿಸರ ಇತಿಹಾಸ ಕ್ಷೇತ್ರದ ಮಹತ್ಸಾಧನೆಗೆ ಮೆಚ್ಚಿಕೊಂಡ ಸಿರಿಗೆರೆಯ ತರಳಬಾಳು ಜಗದ್ಗುರುಗಳು 1949ರಲ್ಲಿ ಐತಿಹ್ಯ ವಿಮರ್ಶನ ವಿಷಕ್ಷಣ ಎಂಬ ಬಿರುದನ್ನು ನೀಡಿ ಸನ್ಮಾನಿಸಿದರು. ಹಾಗೆಯೇ ಕೂಡಲಿ-ಶೃಂಗೇರಿ ಜಗದ್ಗುರುಗಳು ಇತಿಹಾಸ ಸಂಶೋಧನ ಪ್ರಸಕ್ತ ಎಂಬ ಬಿರುದನ್ನು ಕೊಟ್ಟು ಸತ್ಕರಿಸಿದರು.

 

         ಇತಿಹಾಸ ಸಂಶೋಧನೆಯಲ್ಲಿ ಆಸಕ್ತರಾಗಿ ವಕೀಲಿ ವೃತ್ತಿಯತ್ತ ಹೆಚ್ಚು ಗಮನ ಕೊಡದಿದ್ದ, ಜೋಯಿಸರು ಒಳ್ಳೆಯ ಪತ್ರಿಕೋದ್ಯಮಿಯಾಗಿದ್ದರು. ಆಗಿನ ತಾಯಿನಾಡು ಮತ್ತು ವಿಶ್ವಕರ್ನಾಟಕದಂಥ ಪತ್ರಿಕೆಗಳಿಗೆ ಸುಮಾರು ಮೂವತ್ತು ವರ್ಷ ವರದಿಗಾರರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೇ ಚಿತ್ರದುರ್ಗ ಪುರಸಭೆಯ ಉಪಾಧ್ಯಕ್ಷರಾಗಿ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಚುನಾಯಿತ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಶ್ರೀನಿವಾಸ ಜೋಯಿಸರು ಮಾಡಿದ ಮತ್ತೊಂದು ಮಹತ್ಕಾರ್ಯವೆಂದರೇ ಚಿತ್ರದುರ್ಗದಲ್ಲಿ ಒಂದು ಪ್ರಾಚ್ಯ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದ್ದು. ಜೋಯಿಸರಿಗೆ ಕನ್ನಡ ಭಾಷೆಯ ಮೇಲೆ ಅಪಾರವಾದ ಪ್ರೇಮ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಜನ್ಮ ತಾಳಿತು. ಅದೇ 1956ರ ನವೆಂಬರ್ 8ರಂದು ಗುರುವಾರ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇತಿಹಾಸವನ್ನು ತನ್ನ ಉಸಿರಾಗಿಸಿಕೊಂಡು ಬಾಳಿದ ಒಂದು ಹಿರಿಯ ಚೇತನ ತಾನೇ ಒಂದು ಇತಿಹಾಸವಾಗಿ ಕಣ್ಮರೆಯಾಗಿತು.


(ಆಧಾರ: ನಿರಂತರ ಬಿ.ರಾಜಶೇಖರಪ್ಪ)

.....

© 2011 www.chitharadurga.com. Best fit for 1024 X 768 Resolution.