ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು
ಶ್ರೀ. ಶ್ರೀ. ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು (೧೮೯೧ - ೧೯೯೬)
ಇವರು ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೋಗಾಚಾರ್ಯರು, ಶತೋತ್ತರಾಯುಷಿಗಳು, (೧೦೫, ವರ್ಷಗಳಕಾಲ ಬದುಕಿದವರು) ಮಹಾಸಂಘಟಕರು, ಮತ್ತು ನಿಷ್ಕಾಮ ಕರ್ಮಯೋಗಿ, ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ರಾಘವೇಂದ್ರ ಸ್ವಾಮಿಗಳನ್ನು ಹತ್ತಿರದಿಂದ ಬಲ್ಲವರು, ಅವರನ್ನು 'ಅಭಿನವ ಧನ್ವಂತರಿ'ಯೆಂದೇ ತಿಳಿದು ಗೌರವಸಲ್ಲಿಸುತ್ತಾರೆ. ಚಿತ್ರದುರ್ಗ ಜಿಲ್ಲೆಯ 'ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ಈ ಕಗ್ಗ ಹಳ್ಳಿ- ಮಲ್ಲಾಡಿಹಳ್ಳಿಗೆ, ಅವರು ಬಂದದ್ದು, ಅಲ್ಲಿನ ಜನರ ಸುಯೋಗವೇ ಸರಿ. ತಮ್ಮ ಗುರುಗಳಾದ 'ಶಿವಾನಂದ'ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನು ಉದ್ಧರಿಸುವ ಕೆಲಸವನ್ನು ಒಂದು 'ಪರಮಾತ್ಮನ ಪೂಜೆ' ಎಂದು ಸ್ವೀಕರಿಸಿ, ಸುಮಾರು ೪೫-೫೦ ಹಳ್ಳಿಗಳಿಗೆ ಭೇಟಿಕೊಟ್ಟು, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನೂ ತಮ್ಮ ಕೈಗೆ ತೆಗೆದುಕೊಂಡು ಗ್ರಾಮಗಳ ಜನರಿಗೆ ತಿಳುವಳಿಕೆಯನ್ನು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. ೧೯೪೩ ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ ೫೦ ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು
ಬಾಲ್ಯ, ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಸ್ವಾಮಿ ಕೊಲ್ಲೂರಿಗೆ
ಅವರ ತಂದೆಯವರಾದ, 'ಅನಂತ ಪದ್ಮನಾಭ ನಂಬೂದರಿ'ಯವರು, ಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರು, ಮಹಾಪಂಡಿತರು ; ಅಲ್ಲಿನ ಸುತ್ತುಮುತ್ತಲಿನ ಜನಕ್ಕೆ ತಮ್ಮ ಅಮೂಲ್ಯ ಜ್ಞಾನದಿಂದ ಸಲಹೆ ಸಮಾಧಾನ ಹೇಳುತ್ತಿದ್ದರು. 'ಪದ್ಮಾಂಬಳ್',ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು 'ಕುಮಾರ ಸ್ವಾಮಿ' ಎಂದು. ಆದರೆ, ಹುಟ್ಟಿದಾಗಲೇ ಆ ಶಿಶು, 'ಬಾಲರೋಗ'ಕ್ಕೆ ತುತ್ತಾಗಿ ಸುಮಾರು ೧೪ ವರ್ಷ, ಯಾವ ಭಾವನೆಯನ್ನೂ ಅನುಭವಿಸದ ಒಂದು 'ಮಾಂಸದ ಮುದ್ದೆ'ಯಂತಿದ್ದ ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನಲ್ಲಿದ್ದ ಮೂಕಾಂಬಿಕ ದೇವಿಯ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯಲು ನಿರ್ಧರಿಸುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ವೃದ್ಧಾಪ್ಯದಿಂದಲೂ ಮತ್ತು ರೊಗಗಳಿಂದ ಬಳಲಿ ಬೆಂಡಾಗಿದ್ದರು. ನಿಶ್ಯಕ್ತಿ; ನಡೆಯುವುದೂ ಕಷ್ಟ. ೧೪ ವರ್ಷದ ಮಗನನ್ನು ಎತ್ತಿಕೊಂಡೇ ಹೋಗಬೇಕು. ಅಂದಿನ ದಿನಗಳಲ್ಲಿ ರಸ್ತೆಯಾಗಲೀ ವಾಹನ ಸೌಕರ್ಯವಾಗಲಿ ಇರಲಿಲ್ಲ. ದುರ್ಗಮವಾದ ಕಾಡಿನ ಮಧ್ಯೆ ಕಾಡು ಮೃಗಗಳ ನಡುವೆ ತಿಂಗಳುಗಟ್ಟಲೆ ನಡೆದೇ ದಾರಿ ಸವೆಸಬೇಕಾದ ಪ್ರಸಂಗ. ಹೀಗೆಯೇ ಅವರ ’ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ” ಸಾಗಿತ್ತು. ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಅವರು ಬಂದು, ಶ್ರೀ ನರಸಿಂಹಯ್ಯ ಎಂಬ ಸದ್ಗೃಹಸ್ತರ ಮನೆಯಲ್ಲಿ ವಸತಿಮಾಡುತ್ತಾರೆ.
ಮಂತ್ರಾಲಯದ ಸ್ವಾಮಿಗಳ ಆಶೀರ್ವಾದ
ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದಮೇಲೆ, ಪದ್ಮಾಂಬಳ್ ರವರಿಗೆ ಸ್ವಲ್ಪ ಸಮಧಾನವಾಯಿತು.ಮಂತ್ರಾಲಯದ ಯತಿಗಳು ಆ ಬಾಲಕನನ್ನು 'ರಾಘವೇಂದ್ರ',ಎಂದು ಕರೆದರು. ಅಷ್ಟುಹೊತ್ತಿಗೆ ಪದ್ಮಾಂಬಳರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಚಿಂತಾಕ್ರಾಂತರಾಗಿ 'ಬಾರಕೂರು' ಹಳ್ಳಿಯಲ್ಲೇ ಮರಣಹೊಂದುತ್ತಾರೆ. ನಂಬೂದರಿಯವರು ಆ ಬಾಲಕನನ್ನು ತಮ್ಮ ಗೆಳೆಯ ,ಸದ್ಗೃಹಸ್ತರೂ, ಯಕ್ಷಗಾನ ಪಂಡಿತರೂ, ಒಳ್ಳೆಯ ಮತುಗಾರರೂ, ರಾಮಾಯಣ ಮಹಾಭಾರತಗಳನ್ನು ಓದಿ, ವ್ಯಾಖ್ಯಾನಿಸುವುದರಲ್ಲಿ ಸಮರ್ಥರೂ, ಹಾಗೂ 'ಶ್ರೀ.ನರಸಿಂಹಯ್ಯ', ಮತ್ತು ಅವರ ಧರ್ಮಪತ್ನಿಯವರಾದ 'ಶ್ರೀಮತಿ. ಪುಥಲೀಬಾಯಿ'ಯವರಿಗೆ ಒಪ್ಪಿಸಿ, ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ. ಈ ಕಾರ್ಯ ಆದದ್ದು ಕ್ರಿ.ಶ.೧೯೦೬ ರ ಯುಗಾದಿಯ ಶುಭದಿನದಂದು.
ಸಾಕು ತಂದೆ-ತಾಯಿಗಳ ಆಶ್ರಯದಲ್ಲಿ
'ಪುಥಲೀಬಾಯಿ'ಯವರು 'ಕುಮಾರಸ್ವಾಮಿ'ಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ, ಅವನಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತಾರೆ. ದಿನ ಕ್ರಮೇಣ, ಅದ್ಭುತ ಬದಲಾವಣೆಯಾಗಿ ಹುಡುಗನು ಎಲ್ಲರನ್ನೂ ನೋಡಿ ನಗುವುದು, ಗಮನಿಸುವುದು, ಪ್ರತಿಕ್ರಯಿಸುವುದು, ಇವನ್ನು ಮಾಡಿ, ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದನ್ನು ನೋಡಿ, ಈ ಸಾಕುತಂದೆತಾಯಿಗಳು ಸಂತೋಷ ಪಡುತ್ತಾರೆ. ರಾಘವೇಂದ್ರರ ಬಾಲ್ಯದಲಿ ಅವರನ್ನು ಪುಥಲೀ ಬಾಯಿಯವರಿಗೆ ಒಪ್ಪಿಸಲು ಸಹಾಯಮಾಡಿದ ಪುಣ್ಯಾತ್ಮರು, 'ಭಿರ್ತಿಯ ಶ್ರೀ. ರಾಮಚಂದ್ರಶಾಸ್ತ್ರಿಗಳು'. ಇವರು ಉದ್ದಾಮಪಂಡಿತರು ಮತ್ತು ಶ್ರೀ. ಅನಂತಪದ್ಮನಾಭ ನಂಬೂದರಿಯವರ ಆತ್ಮೀಯಗೆಳೆಯರಲ್ಲೊಬ್ಬರು.
ಸ್ವಾಮಿ ಶಿವಾನಂದ ರಿಂದ ತಾರಕ ಮಂತ್ರದ ಉಪದೇಶ
ರಾಘವರ ಜೀವನದಲ್ಲಿ ಹೊಸತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶ್ರೀ. ಶಿವರಾಮಯ್ಯನವರು, 'ತಾರಕಮಂತ್ರ'ವನ್ನು ಉಪದೇಶಿಸಿದ 'ಶ್ರೀ.ನಿತ್ಯಾನಂದಸ್ವಾಮಿಗಳು', 'ಶ್ರೀ ರಂಗನಾಥಭಟ್ಟರು', 'ವರೂಢದ ಶ್ರೀ ಶಿವಾನಂದಸ್ವಾಮಿಗಳು','ಬರೋಡದ ಪ್ರೊ.ಮಾಣಿಕ್ಯರಾಯರು', 'ಪಳನಿಸ್ವಾಮಿಗಳು' ಬಹಳಮುಖ್ಯರಾದ ವ್ಯಕ್ತಿಗಳು. ತಾರಕಮಂತ್ರ (ಶಕ್ತಿಪಾತ ಯೊಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈಇಟ್ಟರು. "ಭೌತಿಕ ಅಸ್ತಿತ್ವವನ್ನೇ ಮರೆಸಿ, ಅದ್ಯಾವುದೊ ಅಲೌಕಿಕ ಅನುಭವದ ಚರಮಸೀಮೆಯನ್ನು ದಾಟಿಸಿದಂತಹ ಭಾವ, ಅದು ; ನಾನೆಂಬ ಅಹಂಭಾವ ಲುಪ್ತವಾಗಿಬಿಟ್ಟಿತ್ತು. ಕೇವಲ ಆನಂದದ ಅನುಭೂತಿ. ದ್ವಂದ್ವಗಳಿಲ್ಲದ ನಿರ್ಲಿಪ್ತ- ಶೂನ್ಯ ಸ್ಥಿತಿ; ಜಗತ್ ಸೃಷ್ಟಿಯ ಪ್ರಥಮ ಅಧ್ಯಾಯದಂತೆ "! - ಹೀಗಿತ್ತು ರಾಘವರ ಅನುಭವ. ಇದಾದ ಮೇಲೆ ಅವರಿಗೆ ದೇವರನ್ನು ಕಾಣುವ ಹಂಬಲ ಹೆಚ್ಚಾಯಿತು. 'ದೈವಸಾಕ್ಷಾತ್ಕಾರ'ಕ್ಕೆ ಅವರ ಮನಸ್ಸು ಹಂಬಲಿಸುತ್ತಿತ್ತು. ಅದನ್ನು ಕಂಡುಕೊಳ್ಳಲು ಅವರು ಅನೇಕ ಮಹಾತ್ಮರನ್ನೂ, ಸ್ವಾಮಿಗಳನ್ನು ಭೇಟಿಮಾಡಲು ಹೋಗಿ, ಅವರ ಅನುಗ್ರಹಕ್ಕೆ ಬಹಳವಾಗಿ ಶ್ರಮಿಸಿದರು. ದೇಹಧಾರಢ್ಯವನ್ನು ಉತ್ತಮಗೊಳಿಸಿಕೊಂಡು ತಮ್ಮ ಮುಂದಿನ ಆಶೋತ್ತರಗಳಾದ, ರಾಷ್ಟ್ರಸೇವೆಯ ಕನಸನ್ನು ಈಡೇರಿಸಿಕೊಳ್ಳಲು ಎಲ್ಲ ಯೋಗಿವರ್ಯರೂ ಅವರಿಗೆ ಬೋಧಿಸಿದರು. 'ದೇವರು' ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದ ಯತಿವರ್ಯರು, ಶ್ರೀ.ಸ್ವಾಮೀ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ, ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ದೇವರು- ಎಂಬುದು ಒಂದು ದೃಷ್ಟಿಕೋನ- ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು 'ಭಾವಶುದ್ಧಿ'ಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ತಮ್ಮ ಮುಂದಿನ ಜೀವನವನ್ನು ಇದೇ ದಾರಿಯಲ್ಲಿ ನಡೆಸಿಕೊಂಡು ಹೋಗಲು ಅವರು ನಿರ್ಧರಿಸಿದರು.
ಮಲ್ಲಾಡಿಹಳ್ಳಿಗೆ ಆಗಮನ, ಅನಾಥಸೇವಾಶ್ರಮದ ಸ್ಥಾಪನೆ
ಆದರೆ ಇದೇ ಒತ್ತಾಯ ಮುಂದೆಯೂ ಬಂದು, ಅವರಿಗೆ ಗೊತ್ತಿಲ್ಲದಂತೆ ಸುಮಾರು ೫೦ ವರ್ಷಗಳನ್ನು ಮಲ್ಲಾಡಿಹಳ್ಳಿಯಲ್ಲೇ ಅವರು ಕಳೆಯುವ ಪ್ರಮೇಯ ಒದಗಿಬಂತು. ಹೀಗೆ ಅವರು ತಮ್ಮ ಕನಸು ನನಸಿನಲ್ಲೂ ಒಮ್ಮೆಯು ಯೋಚಿಸದ ಗ್ರಾಮ ಮಲ್ಲಾಡಿಹಳ್ಳಿ. ನಿಶ್ಚಯವಾಗಿಯೂ, ಅದು ವಿಶ್ವನಿಯಾಮಕನ ಸಂಕಲ್ಪವೇ ಇರಬೇಕೆಂದು ರಾಘವೇಂದ್ರರು ಭಾವಿಸುತ್ತಾರೆ. ಹೀಗೆ ರಾಘವೇಂದ್ರರು ಸ್ಥಾಪಿಸಿದ 'ಅನಾಥ ಸೇವಾಶ್ರಮ' ಅನಾಥರಿಗೆ, ಬಡ ಮಕ್ಕಳಿಗೆ, ಒಂದು 'ಸೇವಾಕುಟೀರ'ವಾಗಿ ಬೆಳೆಯಿತು. ರಾಘವರ ಅಪಾರ ಶಿಷ್ಯವೃಂದದಲ್ಲಿ ಆಗತಾನೇ ಹೊಳಲ್ಕೆರೆಯಿಂದ ಆಗಮಿಸಿದ 'ಸೂರ್ಯನಾರಾಯಣ', ಎಂಬುವರು ಬಹಳಮುಖ್ಯರು. ಇವರೇ ಮುಂದೆ 'ಸೂರ್ದಾಸ್ ಜೀ' ಎಂದು ಹೆಸರಾದವರು; ಇವರು ಅನಾಥಸೇವಾಶ್ರಮದ ಸರ್ವತೋಮುಖ ಬೆಳವಣಿಗೆಗೆ ರಾಘವೇಂದ್ರರ ನೆರಳಿನಂತೆ ಇದ್ದು ,ಪ್ರಗತಿಗೆ ಕಾರಣರಾದರು. ಪ್ರತಿವರ್ಷವೂ ಅಕ್ಟೋಬರ್ ೪ನೆಯ ತಾರೀಖಿನಿಂದ ೨೪ ರವರೆಗೆ ಆಯುರ್ವೇದ, 'ಯೋಗ ಶಿಬಿರ'ಗಳಿದ್ದು ಅಲ್ಲಿ ವಿದ್ಯಾರ್ಥಿಗಳಿಗೆ 'ಅಷ್ಟಾಂಗ ಆಯುರ್ವೇದ' ವಿಭಾಗಗಳಿಂದ ಆಯ್ದ, ಕೆಳಗೆ ನಮೂದಿಸಿದ ಶಾಸ್ತ್ರ, ತಂತ್ರಗಳನ್ನು ಹೇಳಿಕೊಡುತ್ತಿದ್ದರು.
ರಾಘವೇಂದ್ರ ಸ್ವಾಮಿಗಳ,ನಿಧನ
ತಿಂಗಳ ಮೇಲೆ 'ಕೋಮಾ' ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ಹೀಗೆ ಒಬ್ಬ ಮಹಾಯೋಗಾಚಾರ್ಯರು ಶನಿವಾರ, ಬೆಳಿಗ್ಯೆ,೧೦-೩೦, ಆಗಸ್ಟ್ ೩೧, ೧೯೯೬ ರಂದು (ಶುದ್ಧ ಆಷಾಢ) ದೈವೈಕ್ಯರಾದರು. ಅವರ ಅಂತಿಮ ಸಂಸ್ಕಾರವನ್ನು ಮಲ್ಲಾಡಿಹಳ್ಳಿಯಲ್ಲಿ ಮುಗಿಸಿ, ಒಂದು ಭವ್ಯ 'ಸಮಾಧಿ'ಯನ್ನು ಆಶ್ರಮದ ಆಂಗಣದಲ್ಲೆ ನಿರ್ಮಿಸಿದ್ದಾರೆ. ರಾಘವೇಂದ್ರಸ್ವಾಮಿಗಳು ಆಗಾಗ ಹೇಳುತ್ತಿದ್ದ ಅವರ ವಾಕ್ಯಗಳಲ್ಲಿ ಒಂದಾದ, "ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ ," ಎಂಬ ವಾಕ್ಯ ಅವರ ಸಮಾಧಿಯ ಮುಂದೆ ಹಾಕಿರುವ ಫಲಕದಲ್ಲಿ ಎದ್ದು ಕಾಣಿಸುತ್ತಿದೆ. ಎಷ್ಟು ಅರ್ಥಪೂರ್ಣವಾದ ಮಾತು ! ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು ,ತಮ್ಮ ಜೀವನವನ್ನು 'ಸಾರ್ಥಕ'ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು. ಎರಡು ವರ್ಷಗಳ ನಂತರ ’ಸೂರ್ದಾಸ್ ಜೀ” ರವರೂ, ರಾಘವೇಂದ್ರ ಸ್ವಾಮಿಗಳ ನೆನಪಿನಲ್ಲೇ, ತಮ್ಮ ಜೀವನದ ಅಂತ್ಯವನ್ನು ಕಂಡುಕೊಂಡರು. ಅವರು ಮರಣಹೊಂದಿದ್ದೂ ಶನಿವಾರ, ಬೆಳಿಗ್ಯೆ, ೧೦-೩೦, ಆಗಸ್ಸ್ಟ್ ೩೧ ರಂದು, ೧೯೯೮ ರಂದು. ಅವರು ತಮ್ಮ ಗುರುಗಳ ಶ್ರೇಷ್ಟ ಆಜ್ಞಾರಾಧಕರಾಗಿದ್ದರು. ಅವರ ಅಂತ್ಯ ಸಂಸ್ಕಾರದ ನಂತರ, ಮಲ್ಲಾಡಿಹಳ್ಳಿಯ ಜನತೆ, ಅವರ ಗೌರವಾರ್ಥವಾಗಿ ಅವರ ಗುರುಗಳಾದ, ಶ್ರೀ ರಾಘವೇಂದ್ರ ಸ್ವಾಮಿಗಳ ಬದಿಯಲ್ಲೇ ಸಮಾಧಿಮಾಡಿದರು. ಇಂದಿಗೂ ವಿಶ್ವದ ಎಲ್ಲಾ ಕಡೆಗಳಿಂದಲೂ ನೂರಾರು, ಸಹಸ್ರಾರು ಜನ, ಶಿಷ್ಯರು, ಅನುಯಾಯಿಗಳು, ಅವರನ್ನು ಕಂಡ ಜನತೆ, ತಮ್ಮ "ಶ್ರದ್ಧಾಂಜಲಿ" ಯನ್ನು ಸಮರ್ಪಿಸಲು ಮಲ್ಲಾಡಿಹಳ್ಳಿಗೆ ಬರುತ್ತಾರೆ.
ರಾಘವೇಂದ್ರ ಸ್ವಾಮಿಗಳ ಮರಣಾನಂತರ ಚಿತ್ರದುರ್ಗದ ಶ್ರೀ. ಶ್ರೀ. ಮರುಘರಾಜೇಂದ್ರಸ್ವಾಮಿಗಳು, ಮಲ್ಲಾಡಿಹಳ್ಳಿಯ ಆಶ್ರಮವನ್ನು ನೋಡಿಕೊಳ್ಳುತ್ತಿದ್ದಾರೆ
ಈಗ, ಚಿತ್ರದುರ್ಗದ ಶ್ರೀ. ಶ್ರೀ. ಮರುಘರಾಜೇಂದ್ರಸ್ವಾಮಿಗಳು, ಮಲ್ಲಾಡಿಹಳ್ಳಿಯ ಎಲ್ಲಾ ಸಂಘಟಕಗಳ ಮೇಲ್ವಿಚಾರಣೆಯನ್ನು ಕೈ ಗೆತ್ತಿಕೊಂಡು ನಡೆಸಿಕೊಂಡು ಬರುತ್ತಿದ್ದಾರೆ. ಕಾಲೇಜುಗಳು, ಹಾಗೂ ಋಗ್ಣಾಲಯ, ಮಕ್ಕಳ, ಶಾಲಾ ಶಿಕ್ಷಕರ ವಸತಿಗೃಹಗಳು ಚೆನ್ನಾಗಿ ನಡೆಯುತ್ತಿವೆ. |