ಮತ್ತೋಡು ಪಾಳೆಯಗಾರರು
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದು ಮತ್ತೋಡು. ಇಲ್ಲಿ ವೇದಾವತಿ ನದಿ ಹರಿಯುತ್ತಿದ್ದು, ಇದು ಕಣಿವೆ ಪ್ರದೇಶದಲ್ಲಿದೆ. ಹಿಂದೆ ಈ ಪ್ರದೇಶವನ್ನು ಮತಿವಂತರ ನಾಡು, ಮುತ್ತೈದರ ನಾಡು ಎಂದು ಕರೆಯುತ್ತಿದ್ದರೆಂದು ಜನಪದರ ಹೇಳಿಕೆಗಳಿವೆ. ಆದರೆ ಶಾಸನಗಳಲ್ಲಿ ಮತ್ತೋಡನ್ನು ‘ಮತ್ತಿನಾಡು’, ‘ಮತ್ತಿನಡು’, ‘ಮತನಡು’, ‘ಮತ್ತೇಡು’, ‘ಮತ್ತೋಡು’ ಎಂದೆಲ್ಲಾ ಕರೆಯಲಾಗಿದೆ. ಇವುಗಳಲ್ಲಿ ‘ಮತ್ತಿನಾಡು’ ಎಂಬುದೇ ಸ್ಥಳನಾಮದ ಮೂಲರೂಪವಿರುವಂತೆ ತೋರುತ್ತದೆ. ಆದರೆ ಹೆಚ್ಚು ಪ್ರಚಲಿತವಿರುವ ರೂಪ ‘ಮತ್ತೋಡು’ ಎಂದೆ. ಕ್ರಿ.ಶ. 17ನೇ ಶತಮಾನದ ಆರಂಭದಿಂದ 18ನೇ ಶತಮಾನದ ಕೊನೆವರೆಗೆ ಮತ್ತೋಡನ್ನು ರಾಜಧಾನಿಯನ್ನಾಗಿಸಿ ಆಳಿದವರೇ ಮತ್ತೋಡು ಪಾಳೆಯಗಾರರು. ಕ್ರಿ.ಶ. 1604 ರಿಂದ 1779 ರವರೆಗೆ 175 ವರ್ಷಗಳ ಕಾಲ ಈ ಮನೆತನದವರು ಆಳಿರುವುದು ಸ್ಪಷ್ಟವಾಗಿದೆ. ಆದರೂ ಅವರ ಇತಿಹಾಸ ಅಸ್ಪಷ್ಟವಾಗಿಯೇ ಉಳಿದಿದೆ. |