HISTORY OF CHITRADURGA
ದಿನಾಂಕ:

ಹರತಿ ಪಾಳೆಯಗಾರರು

 

ಹರ್ತಿಕೋಟೆಯು ಹರತಿ ಮನೆತನದ ನಾಯಕರ ರಾಜಧಾನಿ. ಈಗಲೂ ಇಲ್ಲಿ ಪ್ರಾಚೀನ ಕೆರೆ, ಬಾವಿ, ಕಂದಕ, ಕೋಟೆಯ ಪ್ರಾಕಾರ, ದೇವಾಲಯ, ದೀಪಸ್ತಂಬ, ರಾಜಸಮಾಧಿ, ಶಾಸನ, ವಿಗ್ರಹ ಇತ್ಯಾದಿ ಸ್ಮಾರಕಗಳನ್ನು ಕಾಣಬಹುದು. ಇಲ್ಲಿ ಸುಮಾರು 101 ದೇವಾಲಯಗಳಿವೆ ಎಂಬುದು ಕೇಳಿ ಬಂದಿರುತ್ತದೆ.

 

 ಹರತಿಯ ಇತಿಹಾಸ:

ಹರತಿ ಎಂಬುದು ಪ್ರಾಚೀನ ನಾಯಕ ಮನೆತನಗಳಲ್ಲಿ ಒಂದು. ಈ ನಾಯಕರು ತಮ್ಮ ಮೂಲದೇವತೆ ಹರತಿ ಕಾರಣದಿಂದಾಗಿ ಹರತಿನಾಯಕರೆಂತಲೂ, ಹಾರತೇಯರು ಎಂತಲೂ ಸ್ಥಳೀಯ ದಾಖಲೆಗಳು ಸಮರ್ಥಿಸುತ್ತವೆ. ಈ ನಾಯಕರು ತಮ್ಮ ಶಾಖೆಗಳನ್ನು ಹರತಿ-ನಿಡಗಲ್ಲು, ಹರತಿ-ಐಮಂಗಲ ಹೆಸರಿನಿಂದಲೂ ಗುರುತಿಸಿಕೊಂಡಿದ್ದಾರೆ. ಈ ಮನೆತನದವರಿಗೆ ಸಂಭಂಧಿಸಿದ ಪ್ರಾದೇಶಿಕ ರಾಜಧಾನಿಗಳಲ್ಲಿ ಹರ್ತಿಕೋಟೆಯಷ್ಟೆ ಪ್ರಸಿದ್ಧವಾದ ಇನ್ನೊಂದು ಎಡೆಯೆಂದರೆ ಪಾವಗಡ ತಾಲ್ಲೂಕಿನ ನಿಡಗಲ್ಲು.

 

ಹರತಿಯ ತಿಪ್ಪರಾಜನೆಂಬುವನು ಹರತಿ ಮನೆತನದ ಸ್ಥಾಪಕ ಎನ್ನಲಾಗುತ್ತದೆ. ಈತನ ಕಾಲಾವಧಿ ಸುಮಾರು 1340 ರಿಂದ 1355. ವಿಜಯನಗರ ಸಂಗಮ ಮನೆತನದ ಹರಿಹರ ಮತ್ತು ಬುಕ್ಕರಾಯರ ಸಮಕಾಲೀನನಾಗಿದ್ದು, ಅವರ ಸೈನ್ಯದಲ್ಲಿ ಪ್ರಮುಖ ದಳಪತಿಯಾಗಿದ್ದನು. ತಿಪ್ಪರಾಜನು ಅಪ್ರತಿಮ ಸಾಹಸಿಯಾದ್ದರಿಂದಲೇ ವಿಜಯನಗರದ ಹರಿಹರರಾಯ ಮತ್ತು ಬುಕ್ಕರಾಯ – ಈ ಇಬ್ಬರ ಪ್ರೀತಿಗೆ ಪಾತ್ರನಾದ. ನಿಡಗಲ್ಲಿನ ದುರ್ಗಾಧಿಪತಿಯೂ ಹೊಯ್ಸಳ ಸಾಮಂತರಲ್ಲಿ ಅತಿ ಬಲಿಷ್ಟನೂ ಆಗಿದ್ದ ಚಿಕ್ಕಬೊಮ್ಮನಾಯಕ ಎಂಬುವವನ್ನು ದ್ವಂದ್ವಯುದ್ದಲ್ಲಿ ಶಿರಚ್ಛೇದನ ಮಾಡಿದ್ದರಿಂದ ಹರಿಹರನಿಂದ ಹೊಳಕಲ್ಲು ಬೊಂಮನ ಶಿರಚ್ಛೇದನಂ ಎಂಬ ಬಿರುದನ್ನು ಪಡೆದುಕೊಂಡಿದ್ದನು. ತಿಪ್ಪರಾಜನ ನಂತರ ಮಗ ಕಾಮಯ್ಯನಾಯಕ ಹರತಿ ಮನೆತನದ ಕೀರ್ತಿಯನ್ನು ಮುಂದುವರೆಸಿದನು.

 

ಹರ್ತಿಕೋಟೆ ಗ್ರಾಮ ನೆಲೆಸಿರುವುದು ಹಿರಿಯೂರು ತಾಲ್ಲೂಕಿನಲ್ಲಿ. ಬೆಂಗಳೂರು – ಬಳ್ಳಾರಿ ಹೆದ್ದಾರಿಯಲ್ಲಿ ಹಿರಿಯೂರು-ಚಳ್ಳಕೆರೆ ಮಧ್ಯೆ ಸಿಗುವ ಊರು ಇದು. ಹಿರಿಯೂರಿನಿಂದ ಹರ್ತಿಕೋಟೆಗೆ ಇರುವ ಅಂತರ ಸುಮಾರು 14 ಕಿ.ಮೀ. ನಾಯಕರ ಆಳ್ವಿಕೆಯ ಅವಧಿಯಲ್ಲಿ ಊರಿನ ಹೆಬ್ಬಾಗಿಲು ಇದ್ದದ್ದು ಪೂರ್ವದಿಕ್ಕಿನಲ್ಲಿತ್ತಾದರೂ, ಊರನ್ನು ಪಶ್ಚಿಮ ದಿಕ್ಕಿನಿಂದ ಪ್ರವೇಶಿಸಬೇಕು. ಈಗ ಊರನ್ನು ಪ್ರವೇಶಿಸುವ ದಾರಿಯ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿರುವ ವಿಶಾಲವಾದ ಕೆರೆಯೇ ದೊಡ್ಡಕೆರೆ. ಗ್ರಾಮದ ಯರಬಳ್ಳಿ ಮಾರಕ್ಕನ ಗುಡಿಯ ಮುಂದಿರುವ ಇನ್ನೊಂದು ಕೆರೆಯೇ ಚಿಕ್ಕಕೆರೆ.

 

ಈ ನೆಲೆಯಲ್ಲಿದ್ದ ಕೋಟೆಯು ದುಂಡಾಕಾರದಲ್ಲಿದ್ದು, ಈಗಿನ ಹರ್ತಿಕೋಟೆ ಗ್ರಾಮದ ಅರ್ಧದಷ್ಟು ಆವರಿಸಿದ್ದಿತೆಂದು ತಿಳಿದು ಬಂದಿರುವುದರಿಂದ ನಿರ್ಮಿಸಲಾಗಿದ್ದ ಕೋಟೆ; ಈಗ ನಾಶಗೊಂಡಿದೆ. ಆದರೆ ಕಂದಕ ಹಾಗೂ ಕೋಟೆಯ ಕುರುಹುಗಳನ್ನು ಅಲ್ಲಲ್ಲಿ ಕಾಣಬಹುದು. ಹರ್ತಿಕೋಟೆಯಲ್ಲಿ ಈಗ ಪ್ರಧಾನವಾಗಿ ಕಂಡು ಬರುವ ಸ್ಮಾರಕಗಳಲ್ಲಿ ದೇವಾಲಯಗಳು, ಅವುಗಳಿಗೆ ಹೊಂದಿದಂತಿರುವ ಉಯ್ಯಾಲೆ ಮಂಟಪ ಹಾಗೂ ದೀಪಸ್ತಂಬಗಳು, ಕೆಲವು ವೀರಗಲ್ಲುಗಳು, ಐತಿಹಾಸಿಕ ವ್ಯಕ್ತಿಗಳ ಸಮಾಧಿಗಳು ಮುಖ್ಯವಾದವು. ಹರ್ತಿಕೋಟೆಯ ಪ್ರತಿಷ್ಟಿತ ದೇವಾಲಯವೆಂದರೆ ವೀರಭದ್ರಸ್ವಾಮಿಯದು. ವಿಶಾಲವಾದ ನವರಂಗ, ಸುಕನಾಸಿ, ಹಾಗೂ ಗರ್ಭಗುಡಿಗಳಿಂದ ಪ್ರತಿಷ್ಟಾಪಿಸಲಾಗಿದೆ. ಚಾವಡಿಯಂತಿರುವ ದ್ವಾರಮಂಟಪ ಮತ್ತು ಇದಕ್ಕೆ ಹೊಂದಿಕೊಂಡ ದೀಪಸ್ತಂಭಗಳು ಇಲ್ಲಿ ಪ್ರಧಾನವಾಗಿ ಕಂಡು ಬರುತ್ತದೆ.

 

ಹಳೇ ಊರು ಕೋಟೆಯಿಂದ ಆವೃತ್ತವಾಗಿದ್ದಿತೆಂದು ಹಿಂದೆಯೇ ಹೇಳಿದೆ. ಇದನ್ನು ಪ್ರವೇಶಿಸಬೇಕಿದ್ದ ಪೂರ್ವದಿಕ್ಕಿನಿಂದ. ಎಲ್ಲೆಡೆ ಇರುವಂತೆ ಇಲ್ಲಿಯೂ ಕೋಟೆಯು ಪ್ರವೇಶದ್ವಾರದ ಬಲಭಾಗದಲ್ಲಿದೆ. ಆಂಜನೇಯಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಇನ್ನೊಂದು ದೇವಾಲಯವೆಂದರೆ ವೆಂಕಟರಮಣಸ್ವಾಮಿಯದು. ಈಗ ಇವು ಊರ ಹೊರಗಿನ ದೇವಾಲಯಗಳೆಂತಲೇ ಪರಿಗಣಿಸಲ್ಪಡುತ್ತವೆ. ಹರ್ತಿಕೋಟೆಯ ಪ್ರಮುಖ ದೇವಾಲಯಗಳ ಪೈಕಿ ಆಂಜನೇಯಸ್ವಾಮಿಗೆ ಹೆಚ್ಚಿನ ಆದ್ಯತೆ ದೊರೆತಿರುವುದು ಸಹಜ. ಇಲ್ಲಿಯ ಆಕರ್ಷಣೀಯ ಸ್ಮಾರಕಗಳೆಂದರೆ ಈ ದೇವಾಲಯದ ಎದುರುಗಿರುವ ಉಯ್ಯಾಲೆಸ್ತಂಭ ಮತ್ತು ಏಕಶಿಲಾ ಸ್ತಂಭಗಳು.

 

ಹಳೆಯ ಸಮಾಧಿಗಳ ಪೈಕಿ ಧರ್ಮಪ್ರಭು ವೀರಪದ್ದ(ದ್ಮ)ಣ್ಣನಾಯಕನದು. ಈ ಮಹತ್ವದ ಸ್ಮಾರಕವು ವೀರಭದ್ರಸ್ವಾಮಿ ದೇವಾಲಯದ ದ್ವಾರಮಂಟಪದ ಮುಂಭಾಗದಲ್ಲಿದೆ. ಹರ್ತಿಕೋಟೆಯ ಪ್ರಸಿದ್ಧ ಐತಿಹಾಸಿಕ ಸ್ಥಳವಾದ್ದರಿಂದ ಹಲವಾರು ವೀರಗಲ್ಲುಗಳು ಊರಿನ ತುಂಬೆಲ್ಲಾ ಹರಡಿಕೊಂಡಿದೆ. ವೀರ-ಮಾಸ್ತಿಗಲ್ಲುಗಳ ಪೈಕಿ ಬೀರೇದನೆಂಬುವವನ ಹೆಸರಿನಲ್ಲಿರುವ ಸ್ಮಾರಕ ಶಿಲೆ ಆಕರ್ಷಿತವಾಗಿದ್ದು ಹಾಗೂ ಶಾಸನೋಕ್ತವಾಗಿದ್ದು.

 

ಹರ್ತಿಕೋಟೆಯ ಮಧ್ಯದಲ್ಲಿರುವ ಕಲ್ಲುಬಾವಿಯೊಂದು ವಿಸ್ಮಯಕಾರಿ ರಚನೆ. ಇಡೀ ಬಾವಿಯನ್ನು ಗಟ್ಟಿಯಾದ ಗ್ರಾನೈಟ್ ಕಲ್ಲಿನಿಂದ ಅಥವಾ ಜೇನುಮುದ್ರಕಲ್ಲಿನಿಂದ ನಿರ್ಮಿಸಲಾಗಿದೆ. ತಳಭಾಗದಿಂದ ಭೂಮಟ್ಟದವರೆಗಿನ ಇದರ ಎತ್ತರ 33 ಅಡಿಗಳು. ಇಂದಿಗೂ ಸುಸ್ಥಿತಿಯಲ್ಲಿರುವ ಬಾವಿಯನ್ನು ರತ್ನಗಿರಿ ಪಾಳೆಯಗಾರರು ನಿರ್ಮಿಸಿದ್ದರೆನ್ನಲಾಗಿದೆ.


(ಆಧಾರ: ಹರಿತಿ ಸಿರಿ ಲಕ್ಷ್ಮಣ್ ತೆಲಗಾವಿ)

 

.....

© 2011 www.chitharadurga.com. Best fit for 1024 X 768 Resolution.