|
|
|||||||||||||||||
![]() |
ಇತಿಹಾಸ |
![]() |
|||||||||||||||
|
|||||||||||||||||
|
ಬೂದಿಹಾಳು ಪಾಳೆಯಗಾರರು
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಬಹಳಷ್ಟು ಪಾಳೆಯಪಟ್ಟುಗಳು ಅಸ್ತಿತ್ವಕ್ಕೆ ಬಂದವು. ಅದರಲ್ಲಿ ಬೂದಿಹಾಳು ಪಾಳೆಯಪಟ್ಟು ಸಹಾ ಒಂದು ಈಗಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ “ಬೂದಿಹಾಳು”, ಈಗ ಹೆಸರು ಬದಲಿಸಿಕೊಂಡು “ಶ್ರೀರಾಂಪುರ” ಎಂದಾಗಿದೆ. ಇದನ್ನು ತಮ್ಮ ರಾಜಧಾನಿಯಾಗಿ ಮೂಲತಃ ಗೊಲ್ಲ ಜನಾಂಗದವರಿದ್ದು, ನಂತರ ವೀರಶೈವರ ಪ್ರಭಾವಕ್ಕೆ ಒಳಗಾಗಿ, ಆಳ್ವಿಕೆ ನಡೆಸಿದವರೇ “ಬೂದಿಹಾಳು ಪಾಳೆಯಗಾರರು”. ಇವರಲ್ಲಿ ಪ್ರಖ್ಯಾತನಾದವನು “ಸಿರುಮ” ಅಥವಾ “ಸಿರುಮಣನಾಯಕ”.
ಈ ಪಾಳೆಯಪಟ್ಟು ಪ್ರಾರಂಭವಾದದ್ದು ವಿಜಯನಗರ ಪ್ರೌಢರಾಯನ ಕಾಲದಲ್ಲಿ ಒಂದು “ಗೊಲ್ಲ ಸಿರುಮನ ಚರಿತೆ” ಸೂಚಿಸುತ್ತದೆ. ಇವರು ಸುಮಾರು ಕ್ರಿ.ಶ. 1425 ರಿಂದ ಆರಂಭಿಸಿ ಸುಮಾರು 45-50 ವರ್ಷ ಆಳಿದಂತಿದೆ. ಈ ಪಾಳೆಯಪಟ್ಟನ್ನು ಪ್ರಾರಂಭಿಸಿದನು. “ಕಾಚ” ಅಥವಾ “ಕಾಚನಾಯಕ” ಇವನ ಮಕ್ಕಳೇ “ಸಿರುಮ” ಮತ್ತು “ಮಲ್ಲ”. ತಂದೆಯ ನಂತರ ಸಿರುಮನು ಪಟ್ಟಕ್ಕೆ ಬಂದನು. ‘ಸಿರುಮ’ನು ‘ಬೂದಿಹಾಳ್’ನಲ್ಲಿ, ‘ಮಲ್ಲ’ನು ‘ಹೆಗ್ಗೆರೆ’ಯಲ್ಲಿಯೂ ಇದ್ದು ರಾಜ್ಯವನ್ನು ನೋಡಿಕೊಳ್ಳುತ್ತಿದ್ದರು.
ಸುತ್ತಮುತ್ತಲಿನ ಕೆಲವು ಪಾಳೆಯಗಾರರು ಸಿರುಮನನ್ನು ಹೇಗಾದರೂ ಮುರಿಯಬೇಕೆಂದು, ಅದಕ್ಕೆ ಬಲಿಷ್ಟನಾದ “ಸಾಳುವ ನರಸಿಂಹ”ನೇ ಸರಿಯೆಂದು ಅವನಲ್ಲಿಗೆ ಹೋಗಿ, ಸಿರುಮನ ತಂದೆಯಿಂದ ನರಸಿಂಹನ ತಂದೆ ಹತನಾದುದರ ನೆನಪು ಹೊತ್ತು ಉರಿಯುವಂತೆ ಮಾಡಿ, ಅವನನ್ನು ಒಪ್ಪಿಸಿದರು. ಆಗ ಅವನು ಅಪಾರ ಸೈನ್ಯದೊಂದಿಗೆ “ಬೂದಿಹಾಳು” ಕೋಟೆಯನ್ನು ಮುತ್ತಿದನು. ಅನೇಕ ತಿಂಗಳು ಕಾಲ ಮುತ್ತಿಗೆ ನಡೆದರೂ ಸಿರುಮನನ್ನು ಮಣಿಸಲಾಗಲಿಲ್ಲ. ಬೂದಿಹಾಳು ಕೋಟೆಯನ್ನು ಭೇಧಿಸಲೂ ಆಗಲಿಲ್ಲ. ಮುಂದೆ ಸಿರುಮನ ಮೊದಲ ಇಬ್ಬರು ಗಂಡು ಮಕ್ಕಳು ಮಡಿಯಲು, ತಾನು ನಂಬಿದ್ದ ಕೆಲವರು ಶತ್ರುಗಳಾಗಲು, ಇನ್ನು ತಾನು ಹೆಚ್ಚುಕಾಲ ವೈರಿಗಳನ್ನು ನಿರ್ಬಂಧಿಸುವುದಾಗುವುದಿಲ್ಲವೆಂದು ಅರಿತ ಸಿರುಮನು ಸೋಲೋಪ್ಪಿ ವೈರಿಗೆ ಶರಣಾಗಬಾರದೆಂದು ಬಗೆದು, ಅದರಂತೆ ಅರಮನೆಯೊಳಗೆ ದೊಡ್ಡ ಬೆಂಕಿಯ ಕೊಂಡೆಯೊಂದನ್ನು ನಿರ್ಮಿಸಿ, ತನ್ನ ಕೊನೆಯ ಇಬ್ಬರು ಗಂಡು ಮಕ್ಕಳನ್ನು ಊರು ಬಿಟ್ಟು ಹೋಗಲು ಆದೇಶಿಸಿ, ತನ್ನ ಪತ್ನಿ ಮತ್ತು ಅರಮನೆಯ ಇತರ ಸ್ತ್ರೀಯರು, ಮಕ್ಕಳು ಎಲ್ಲರನ್ನೂ ಖಡ್ಗಕ್ಕೆ ಬಲಿಕೊಟ್ಟು, ತಾನು ತನ್ನ ಮಗ ಮಲ್ಲಯ್ಯನಿಂದ ಕಡಿಸಿಕೊಂಡು ಎಲ್ಲರೂ ಬೆಂಕಿಯ ನಾಲಗೆಗೆ ಆಹುತಿಯಾದರು. ಮುಂದೆ ಕೋಟೆ ಭೇಧಿಸಿ ಒಳಬಂದ ಶತ್ರಗಳೊಂದಿಗೆ ಹೋರಾಡುತ್ತಾ ಕುಮಾರ ಮಲ್ಲಯ್ಯನೂ ಮಡಿದನು. ಶತ್ರುಗಳಿಗೆ ಉರಿದುಹೋದ ಅರಮನೆ, ರಾಜಕುಟುಂಬದವರ ಬೂದಿ ಬಿಟ್ಟರೇ ಬೇರೆನೂ ಸಿಕ್ಕಲಿಲ್ಲ. (ಆಧಾರ: “ದುರ್ಗಶೋಧನ”– ಬಿ.ರಾಜಶೇಖರಪ್ಪ) |
||||||||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||||||||