HISTORY OF CHITRADURGA
ದಿನಾಂಕ:

ಚಿತ್ರದುರ್ಗ ಪಾಳೆಯಗಾರರು

 

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ  ಸಂಸ್ಥಾನಗಳಲ್ಲಿ ತುಂಬಾ ಪ್ರಮುಖವಾದದ್ದು. ಇದನ್ನು ಆಳಿದವರು ಚಿತ್ರದುರ್ಗದ ನಾಯಕರು ಎಂದೇ ಖ್ಯಾತರಾಗಿದ್ದಾರೆ. ಕ್ರಿ..16ನೇ ಶತಮಾನದ ಮಧ್ಯಕಾಲದಿಂದ ಕ್ರಿ..18ನೇ ಶತಮಾನದ ಉತ್ತರಾರ್ಧದವರೆಗೆ ಇವರು ಸಂಸ್ಥಾನವನ್ನು ಆಳಿದರು. ಇವರು ಬೇಡ ಜನಾಂಗದವರಾದ್ದರಿಂದ ತಮ್ಮನ್ನು ವಾಲ್ಮೀಕಿ ಗೋತ್ರದವರೆಂದು, ಕಾಮಗೇತಿ ಎಂಬ ವಂಶಕ್ಕೆ ಸೇರಿದ್ದವರಾದ್ದರಿಂದ ಕಾಮಗೇತಿ ಕಸ್ತೂರಿ ಎಂದು ಶಾಸನಗಳಲ್ಲಿ ಕರೆದುಕೊಂಡಿದ್ದಾರೆ. ನಾಯಕರು ತಮ್ಮ ಶೌರ್ಯ, ಧೈರ್ಯ, ಸಾಹಸ, ದಾನಾದಿ ಗುಣಗಳಿಗೆ ಪ್ರಸಿದ್ದರಾಗಿದ್ದರೂ, ಚಿತ್ರದುರ್ಗ ಗಂಡು ಮೆಟ್ಟಿನ ನಾಡು ಎಂದು ಚಿತ್ರದುರ್ಗದ ಕೋಟೆಯ ಏಳು ಸುತ್ತಿನ ಕೋಟೆ ಎಂದು ಪ್ರಸಿದ್ಧಿ ಪಡೆಯುವುದಕ್ಕೆ ಕಾರಣರಾದವರು.

 

ತಿಮ್ಮಣ್ಣನಾಯಕ:

ಇತ್ತೀಚೆಗೆ ದೊರೆತಿರುವ ಅಪೂರ್ಣ ಕಾಗದದ ಹಸ್ತಪ್ರತಿಯ ದಾಖಲೆಯಂತೆ ಒಂದು ಪ್ರದೇಶಕ್ಕೆ ಆಗಲೇ ಅಧಿಪತಿಯಾಗಿದ್ದ ಸಾಳುವ ನರಸಿಂಗರಾಯನು ಚಿತ್ರದುರ್ಗ ಪ್ರದೇಶಕ್ಕೆ ತಾನೇ ಅಧಿಪತಿಯಾಗಬೇಕೆಂದು ಹಂಚಿಕೆ ಹೂಡಿ, ಉಪಾಯವಾಗಿ ನರಸಿಂಗರಾಯನು ತಿಮ್ಮಣ್ಣನಾಯಕನನ್ನು ವಿಜಯನಗರಕ್ಕೆ ಕರೆಸಿಕೊಂಡು ಸೆರೆಯಲ್ಲಿಟ್ಟನು. ಆಮೇಲೆ ತಿಮ್ಮಣ್ಣನಾಯಕನು ಸೆರೆಯಲ್ಲಿಯೇ ಮೃತನಾದನು. ತಿಮ್ಮಣ್ಣನಾಯಕನ ಮರಣ ನಂತರ ವಿಜಯನಗರಕ್ಕೆ ಮರಳಿದ ರಾಮರಾಯ ತಿಮ್ಮಣ್ಣನಾಯಕನ ಉತ್ತರಾಧಿಕಾರಿಯಾಗಿ ಓಬಣ್ಣನಾಯಕ ಅಥವಾ 1ನೇ ಮೆದಕೇರಿನಾಯಕನಿಗೆ ದುರ್ಗದ ನಾಯಕನವನ್ನು ನೀಡಲಾಯಿತು. ಮುಂದೆ ರಾಮರಾಯ ಸ್ವರ್ಗಸ್ಥನಾದ ಮೇಲೆ ಓಬಣ್ಣನಾಯಕನಿಗೆ ದುರ್ಗದ ಅರಸುತನವಾಯಿತು.

 

 ಓಬಣ್ಣ (1ನೇ ಮೆದಕೇರಿ)ನಾಯಕ:

ವಿಜಯನಗರದ (ಅಳಿಯ) ರಾಜರಾಮಯ್ಯನಿಂದ (ತಿಮ್ಮಣ್ಣನಾಯಕನ ನಂತರ) ನಾಯಕತನ ಪಡೆದಿದ್ದ ಓಬಣ್ಣ (1ನೇ ಮೆದಕೇರಿ)ನಾಯಕ, ರಾಜರಾಮಯ್ಯ ನಂತರ ಅರಸುತನ ಪಡೆದನು. ವಿಜಯನಗರದ ಪತನದ ನಂತರ ಚಿತ್ರದುರ್ಗದ ನಾಯಕರು ಸ್ವತಂತ್ರರಾದರು. ಈತನಿಗೆ ಕನಕಗಿರಿಯ ರಂಗಪ್ಪನಾಯಕನ ಮಗಳೊಂದಿಗೆ ಮದುವೆಯಾಗಿತ್ತು. ಅವನ ಮರಣ ನಂತರ (1602) ಅವನ ಮಗ 1ನೇ ಕಸ್ತೂರಿ ರಂಗಪ್ಪನಾಯಕನು ದುರ್ಗದ ದೊರೆಯಾದನು. ಗಾದಿರಿ ಹೆಬ್ಬುಲಿ ಓಬಣ್ಣನಾಯಕನಿಗೆ ಇದ್ದ ಬಿರುದು.

 

1ನೇ ಕಸ್ತೂರಿ ರಂಗಪ್ಪನಾಯಕ:

1ನೇ ಕಸ್ತೂರಿ ರಂಗಪ್ಪನಾಯಕನ ಕಾಲ ಸುತ್ತಮುತ್ತಲ ನಾಯಕರೊಂದಿಗೆ ಘರ್ಷಣೆಯೊಂದಿಗೆ ತುಂಬಿಹೋಗಿತ್ತು. ಚಿತ್ರದುರ್ಗದ ಮೇಲೆ ದಾಳಿ ಮಾಡಿದ ತರೀಕೆರೆಯ ಹನುಮಪ್ಪನಾಯಕನನ್ನು ಕಂದವಾಡಿ ಗುಡ್ಡದ ಬಳಿ ಸೋಲಿಸಿದನು. ಮುಂದೆ ಹರಪ್ಪನಹಳ್ಳಿಯವರೊಂದಿಗೆ ಕ್ರಿ.ಶ. 1636ರ ಸುಮಾರಿನಲ್ಲಿ ಸೀರ್ಯದ ರಂಗಪ್ಪನಾಯಕ ಹಿರಿಯೂರಿಗೆ ಮುತ್ತಿಗೆ ಹಾಕಿದಾಗ ರಂಗಪ್ಪನಾಯಕನಿಗೆ ಗುಂಡು ತಗುಲಿ ಮೃತನಾಗಲು, ಮಸಗಲ್ಲು (ಈಗಿನ ಮಸ್ಕಲ್ಲು) ಗ್ರಾಮದ ಬಳಿ ಸೀರ್ಯದವರೆಲ್ಲ ಶರಣಾದರು. ಅಲ್ಲಿಂದ ಮುಂದೆ ಕಸ್ತೂರಿ ರಂಗಪ್ಪನಾಯಕನು ತನ್ನನ್ನು ತಾನು ಅರಸನೆಂದು ಸಂಭೋಧಿಸಿಕೊಂಡನು. ಕ್ರಿ.ಶ. 1652ರಲ್ಲಿ ಇವನು ಮೃತನಾದನು. ಅವನ ಚಿಕ್ಕಪ್ಪಂದಿರೊಲ್ಲಬ್ಬರಾದ ಇಮ್ಮಡಿ ಮೆದಕೇರಿನಾಯಕನು ಅರಸನಾದನು.

 

ಇಮ್ಮಡಿ ಮೆದಕೇರಿನಾಯಕ:

ಇಮ್ಮಡಿ ಮೆದಕೇರಿನಾಯಕನು ಪಟ್ಟವೇರಿದ ಹೊತ್ತಿಗೆ, ದುರ್ಗದ ಏಳಿಗೆಯನ್ನು ಸಹಿಸದವರ ಸಂಖ್ಯೆಯೂ ಬೆಳೆದಿತ್ತು. ಸುತ್ತಲ ಪಾಳೆಯಗಾರರು ದೇವಪುರವನ್ನು ಮುತ್ತಿದರು. ಆ ಮುತ್ತಿಗೆಯನ್ನು ಎದುರಿಸಿದ ಮೆದಕೇರಿನಾಯಕ ಇವರನ್ನು ಸೋಲಿಸಿ, ಗುಡೇಕೋಟೆ, ನನ್ನಿವಾಳ, ಐಮಂಗಲ, ಹಿರಿಯೂರು ಕೋಟೆಗಳನ್ನು ಸಹ ತೆಗೆದುಕೊಂಡನು. ಜಡಕಲ್ಲುದುರ್ಗದ ಗೌರವ್ವನಾಗತಿಯೊಂದಿಗೆ ಇವನ ವಿವಾಹವಾಗಿತ್ತು. ಕ್ರಿ.ಶ. 1674ರಲ್ಲಿ ಇವನು ನಿಧನನಾದನು. ಇವನಿಗೆ ಮಕ್ಕಳಿರಲಿಲ್ಲ. ಇವನ ಸಾಕುಮಗ ಓಬಣ್ಣನಾಯಕನಿಗೆ ಪಟ್ಟವಾಯಿತು.

 

ಓಬಣ್ಣನಾಯಕ:

ಓಬಣ್ಣನಾಯಕ ಕಾಲದಿಂದ ಒಂದು ಬಗೆಯ ಆಂತರಿಕ, ಅಶಾಂತಿ ದುರ್ಗದಲ್ಲಿ ಪ್ರಾರಂಭವಾಯಿತು ಎನ್ನಬಹುದು. ಇವನಿಗೆ ಪಟ್ಟವಾದ ಮೇಲೆ ಸೇನೆ ಮೊದಲಾದ ಸಿಬ್ಬಂದಿಯವರಿಗೆ ಪಟ್ಟಗಾಣಿಕೆಯಾಗಿ ಅಂದು ಕೊಡಲಾಗುತ್ತಿದ್ದ ಒಂದು ತಿಂಗಳ ಹೆಚ್ಚಿನ ಸಂಬಳವನ್ನು ಕೊಡಲಿಲ್ಲ. ದಳವಾಯಿಗಳೂ, ಮತ್ತಿತರೂ ಸೇರಿ ಇವನನ್ನು ಕೊಂದು ಹಾಕಿದರು. ತದನಂತರ ಇಮ್ಮಡಿ ಮೆದಕೇರಿನಾಯಕ ಅಣ್ಣನಾದ ಸರ್ಜೇರಾಯನ ಎರಡನೇ ಮಗನಾದ ಚಿಕ್ಕಣ್ಣನಾಯಕನಿಗೆ ಕ್ರಿ.ಶ. 1675ರಲ್ಲಿ ಪಟ್ಟ ಕಟ್ಟಲಾಯಿತು.

 

ಲಿಂಗಣ್ಣ(ಮುಮ್ಮಡಿ ಮೆದಕೇರಿ)ನಾಯಕ ಮತ್ತು ಇತರರು:

ಇಲ್ಲಿಯವರೆಗೆ ವಂಚಿತವಾಗಿದ್ದ ದೊರೆತನ, ಚಿಕ್ಕಣ್ಣನಾಯಕನ ಅಣ್ಣನಾಗಿದ್ದ ಲಿಂಗಣ್ಣನಾಯಕನ ಪಾಲಿಗೆ ಬರುತ್ತದೆ. ಇವನು ಮೂರನೇ ಮದಕರಿ ಎಂದು ಕರೆಯಲ್ಪಡುತ್ತಾನೆ. ಆಂತರಿಕ ಕಲಹದಿಂದಾಗಿ ಇವನು ದಳವಾಯಿ ಮುದ್ದಣ್ಣ ಹಾಗೂ ಸೈನಿಕರಿಂದ ಬಂಧನಕ್ಕೆ ಒಳಗಾಗುತ್ತಾನೆ. ಇವನ ನಂತರ ದೊಣ್ಣೆರಂಗಪ್ಪನಾಯಕ ಎಂಬುವವನಿಗೆ ಪಟ್ಟ ಕಟ್ಟುತ್ತಾರೆ. ಕೆಲಕಾಲದ ನಂತರ ಈ ದೊಣ್ಣೆರಂಗಪ್ಪನಾಯಕನನ್ನು ಸಹ ದೇವಾಲಯವೊಂದರಲ್ಲಿ ಸೆರೆಯಲ್ಲಿಡಲಾಯಿತು. ಈ ಹಿಂದೆ ಓಬಣ್ಣನಾಯಕನ ಕಾಲದಲ್ಲಿ ಕಾಣಿಸಿದ್ದ ರೀತಿಯ ಆಂತರಿಕ ಅಶಾಂತಿ ಉಲ್ಬಣಾವಸ್ಥೆಯನ್ನು ಮುಟ್ಟಿತ್ತು. ದುರ್ಗದ ದೊರೆಗಳ ವಂಶಕ್ಕೆ ಸೇರಿದ ನರಗನಹಳ್ಳಿಯ ರಘುವಪ್ಪನಾಯಕ ಎಂಬುವವನಿಗೆ ಪಟ್ಟವನ್ನು ಕಟ್ಟಲಾಯಿತು. ಆದರೆ ಇವನು ಕೂಡ ಕೆಲಕಾಲದಲ್ಲಿಯೇ ನಿಧನನಾದನು.

 

ಭರಮಣ್ಣನಾಯಕ:

ದಳವಾಯಿ ಮುದ್ದಣ್ಣ ಮತ್ತು ಅವನ ಸಂಗಡಿಗರ ವಿರುದ್ಧವಾಗಿ ದಳವಾಯಿ ಭರಮಪ್ಪನ ನೇತೃತ್ವದಲ್ಲಿ ಒಂದು ಗುಂಪು ರೂಪುಗೊಂಡಿತು. ಅವರ ಉಪಾಯದಿಂದ ಮುದ್ದಣ್ಣ ಮತ್ತು ಅವನ ಸಂಗಡಿಗರನ್ನು ಸೆರೆ ಹಿಡಿದು ಶಿರಚ್ಛೇದನ ಮಾಡಿದರು. ದಳವಾಯಿ ಭರಮಪ್ಪ ಮತ್ತಿತರರ ಪ್ರಯತ್ನದಿಂದ, ಬಿಳಿಚೋಡಿನಲ್ಲಿದ್ದ ದುರ್ಗದ ಅರಸು ಮನೆತನಕ್ಕೆ ಸೇರಿದ ಭರಮಣ್ಣನಾಯಕನನ್ನು ಅಲ್ಲಿಂದ ಕರೆತಂದು ಕ್ರಿ.ಶ. 1689ರಲ್ಲಿ ಪಟ್ಟ ಕಟ್ಟಲಾಯಿತು. ಬಿಚ್ಚುಗತ್ತಿ ಭರಮಣ್ಣನಾಯಕ ಎಂದು ಇತಿಹಾಸದಲ್ಲೇ ಅತ್ಯಂತ ಉಲ್ಲೇಖನೀಯ ಅರಸನೆನಿಸಿದ್ದಾನೆ.

 

ಇವನ ಆಳ್ವಿಕೆಯಲ್ಲಿ ದುರ್ಗದ ಸಂಸ್ಥಾನಕ್ಕೆ ಒಂದು ಬಗೆಯ ರಾಜಕೀಯ ಸ್ಥಿರತೆ ಮತ್ತು ಘನತೆ ಬಂದಿತೆಂದರೆ ತಪ್ಪಾಗಲಾರದು. ಇವನು ದೊರೆಯಾಗುವ ಮೊದಲಿದ್ದ ಆಂತರಿಕ ಅಶಾಂತಿ ಇವನು ಆಡಳಿತವನ್ನು ಕೈಗೆ ತೆಗೆದುಕೊಳ್ಳುತ್ತಲೇ ಅವೆಲ್ಲ ಅಡಗಿಹೋದವು. ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಗುಡೇಕೋಟೆ ಮೊದಲಾದ ಸುತ್ತಮುತ್ತಲ ಅರಸರು ಘರ್ಷಣೆಯ ಪ್ರಸಂಗಗಳನ್ನು ತರುತ್ತಿದ್ದರೂ ಅವರನ್ನು ಭರಮಣ್ಣನಾಯಕ ಯಶಸ್ವಿಯಾಗಿ ಎದುರಿಸಿ ಜಯಶೀಲನಾದನು. ಇದಷ್ಟೇ ಅಲ್ಲದೇ ಮರಾಠರು, ಸೀರ್ಯದ ಮೊಗಲ್ ಸುಬೇದಾರರು, ಇವರ ಪ್ರಾಬಲ್ಯ ಅರಿತು ಸಹಕರಿಸುತ್ತಾ ಬಂದರು. ಕಾಲನಂತರ ಕ್ರಿ.ಶ. 1721ರಲ್ಲಿ ಚಿತ್ರದುರ್ಗದ ಹುಲಿಯೊಂದು ಸ್ವರ್ಗಸ್ಥವಾಯಿತು

 

ಹಿರೇಮೆದಕೇರಿನಾಯಕ:

ಭರಮಣ್ಣನಾಯಕನ ನಂತರ ಪಟ್ಟಕ್ಕೆ ಬಂದವನು ಅವನ ಮಗ ಹಿರೇಮೆದಕೇರಿನಾಯಕ. ಹಿರೇಮೆದಕೇರಿನಾಯಕ ಪಟ್ಟಕ್ಕೆ ಬರುತ್ತಿದ್ದಂತೆ ದುರ್ಗದ ದಂಡು ಮೂರು ಸಣ್ಣಕೋಟೆಗಳನ್ನು ಕೈವಶ ಮಾಡಿಕೊಂಡರು. ಶ್ರೀರಂಗಪಟ್ಟಣದ ಅರಸುಗಳು ದುರ್ಗದ ದೊರೆಗಳನ್ನು ತಮ್ಮ ಸಮಾನ ಮಿತ್ರದಂತೆ ಪರಿಗಣಿಸಿ ಆನೆ, ಕುದುರೆ, ಫಿರಂಗಿ ಮುಂತಾದುವುಗಳನ್ನು ಕಾಣಿಕೆಯಾಗಿ ನೀಡಿದರು. ವೆಂಕಟಾಚಲವ್ವನಾಗತಿಯೊಂದಿಗೆ ಹಿರೆಮೇದಕೇರಿನಾಯಕನ ವಿವಾಹವಾಯಿತು.

 

ಕ್ರಿ.ಶ. 1748ರಲ್ಲಿ ಬಿದನೂರು, ಸವಣೂರು, ಹರಪ್ಪನಹಳ್ಳಿ, ರಾಯದುರ್ಗದವರೆಲ್ಲ ಸೇರಿ ಮಾಯಕೊಂಡವನ್ನು ಮುತ್ತಿಗೆ ಹಾಕಿದರು. ಆಗ ಚಂದಾಸಾಹೇಬನು ಹಿರೇಮೆದಕೇರಿಯ ಸೈನ್ಯದೊಂದಿಗೆ ನೆರವಾದನು. ಈ ಕಾಳಗದಲ್ಲಿ ತೀವ್ರ ಗಾಯಗೊಂಡ ಹಿರೇಮೆದಕೇರಿನಾಯಕ ಮಾಯಕೊಂಡದಲ್ಲಿ ಮೃತನಾದನು. ಇವನ ನಂತರ ಇವನ ಮಗನಾದ 2ನೇ ಕಸ್ತೂರಿ ರಂಗಪ್ಪನಾಯಕನು ದೊರೆಯಾಗಿ ಪಟ್ಟಾಭಿಷಿಕ್ತನಾದನು.

 

2ನೇ ಕಸ್ತೂರಿ ರಂಗಪ್ಪನಾಯಕ:

2ನೇ ಕಸ್ತೂರಿ ರಂಗಪ್ಪನಾಯಕನು ಪಟ್ಟಕ್ಕೆ ಬರುತ್ತಿದ್ದಂತೆ ತನ್ನ ತಂದೆಯ ಸಾವಿಗೆ ಕಾರಣವಾದ ಮಾಯಕೊಂಡವನ್ನು ಶತ್ರುಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾದನು. ಮುಂದೆ ಆತನು ಹದಡಿ, ಹೊನ್ನೂರು, ರಾಯದುರ್ಗದ ಕರೇಕಲ್ಲು ತಿಮ್ಮಲಾಪುರ, ಬೂದಿಹಾಳು ಕೋಟೆಯನ್ನು ಗೆದ್ದುಕೊಂಡನು. ಹಿಂದೆ 1ನೇ ಕಸ್ತೂರಿ ರಂಗಪ್ಪನಾಯಕ ಮಾಡಿದಂತೆ ಇವನೂ ಸಹ ತಾನೊಬ್ಬ ಅರಸನೆಂಬಂತೆ ಸಂಭೋಧಿಸಿಕೊಂಡು ಪತ್ರಗಳನ್ನು ಬರೆಸಿದನು. ಮಕ್ಕಳಿಲ್ಲದ ಈ ದೊರೆ ಅಸ್ವಸ್ಥಿತಿಯಲ್ಲಿ (ಬಹುಶಃ ವಿಷಪ್ರಾಶನವೂ ಆಗಿ) ಕ್ರಿ.ಶ. 1754ರಲ್ಲಿ ಸ್ವರ್ಗಸ್ಥನಾದನು.

 

ಕೊನೆಯ ಮೆದಕೇರಿನಾಯಕ:

ಮುಂದೆ ದುರ್ಗಕ್ಕೆ ಅರಸನಾಗಿ ಪಟ್ಟಕ್ಕೆ ಬಂದವನೇ ಕಡೆಯ ಮೆದಕೇರಿನಾಯಕ. ಇವನನ್ನು ರಾಜವೀರ ಮೆದಕೇರಿನಾಯಕ, ಚಿಕ್ಕಮೆದಕೇರಿನಾಯಕ ಎಂತಲೂ ಕರೆಯುತ್ತಾರೆ. ಇವನು ಪಟ್ಟವೇರಿದಾಗ 12ನೇ ವರ್ಷದ ಬಾಲಕ. 2ನೇ ಕಸ್ತೂರಿ ರಂಗಪ್ಪನಾಯಕನಿಗೆ ಮಕ್ಕಳಿಲ್ಲದ ಕಾರಣ ದೊಡ್ಡಮೆದಕೇರಿನಾಯಕನನ್ನು ದತ್ತು ತೆಗೆದುಕೊಂಡಿದ್ದನು. ಆದರೆ ರಾಜಮಾತೆಯಾದಂತಹ ಓಬವ್ವನಾಗತಿ ತನ್ನ ಮಾತು ಕೇಳದಿರಬಹುದೆಂದು ಭಾವಿಸಿ ಅವನ ಉತ್ತರಾಧಿಕಾರವನ್ನು ಉಪಾಯದಿಂದ ತಪ್ಪಿಸಿ, 12 ವರ್ಷದ ಚಿಕ್ಕಮೆದಕೇರಿನಾಯಕನನ್ನು ಜಾನಕಲ್ಲಿನಿಂದ ಕರೆಸಿಕೊಂಡು, ಅವನ ಕೈಗೆ ಮೊಹರನ್ನು (ರಾಜಮುದ್ರೆ) ಕೊಟ್ಟು ಅವನಿಗೆ ಕೂತಪಟ್ಟ ಎಂತಲೂ, ದೊಡ್ಡಮೆದಕೇರಿನಾಯಕನ ಕೈಗೆ ಕತ್ತಿಯನ್ನು ಕೊಟ್ಟು ಅವನನ್ನು ಕಾಳಗದ ಅಯ್ಯ ಎಂದು ಕರೆದು ತಾನು ಸರ್ವಾಧಿಕಾರಿಯಾದಳು.

 

ದೊರೆ ಇನ್ನೂ ಚಿಕ್ಕವನು ಎಂಬ ಕಾರಣಕ್ಕೆ ರಾಯದಯರ್ಗದವರು ಹರಪ್ಪನಹಳ್ಳಿಯವರ ನೆರವು ಪಡೆದು ದಾಳಿ ಮಾಡಿದರಾದರೂ ಯಶಸ್ಸು ಸಿಗಲಿಲ್ಲ. ದಕ್ಷಿಣದ ಕಡೆಗೆ ಮರಾಠರ ಮಾಧವರಾಯನು ಮೆದಕೇರಿನಾಯಕನಿಗೆ ಸಹಾಯ ಕೋರಲು, ಹೈದರನಿಗೆ ಸೇರಿದ ಕೆಲವು ಕೋಟೆಗಳನ್ನು ಗೆದ್ದುಕೊಟ್ಟನು. ಇದರಿಂದ ಹೈದರನಿಗೆ ಮೆದಕೇರಿನಾಯಕನ ಮೇಲೆ ದ್ವೇಷವುಂಟಾಗಿ, ಹೇಗಾದರೂ ಇವನನ್ನು ಹಣಿಯಬೇಕೆಂದು ಹೈದರ್ ಭಾರಿ ಸೈನ್ಯದೊಂದಿಗೆ ದುರ್ಗಕ್ಕೆ ಮುತ್ತಿಗೆ ಹಾಕಿದನು. ಆಗ ಹೈದರನು ದುರ್ಗದ ಸುತ್ತಮುತ್ತಲಿನ ಪಾಳೆಯಗಾರರೆಲ್ಲರ ಸಹಾಯ ಕೋರಿದನು. ಅಷ್ಟೇ ಅಲ್ಲದೇ ನಾಯಕನ ಸೈನ್ಯದಲ್ಲಿದ್ದ ಕೆಲವು ಮುಸಲ್ಮಾನ ಸರದಾರರು ಮತ್ತು ಕೆಲವು ಹಿಂದು ಅಧಿಕಾರಿಗಳು ಹೈದರನಿಗೆ ಶಾಮೀಲಾಗಿದ್ದರಿಂದ ಕ್ರಿ.ಶ. 1779ರಲ್ಲಿ ದುರ್ಗ ಹೈದರನಿಗೆ ವಶವಾಯಿತು.

 

ಚಿಕ್ಕಮೆದಕೇರಿನಾಯಕ ಮತ್ತು ದೊಡ್ಡಮೆದಕೇರಿನಾಯಕರನ್ನು ಬೇರೆಬೇರೆಯಾಗಿ ಬಂಧಿಸಿ ಶ್ರೀರಂಗಪಟ್ಟಣಕ್ಕೆ ಸಾಗಿಸಿದರು. ಬಂಧನದಲ್ಲಿದ್ದ ತಮ್ಮ ಪರಶುರಾಮನಾಯಕ ಹಾಗೂ ಮಗ ಕುಮಾರ ಭರಮಪ್ಪನಾಯಕರು ಕಬ್ಬಾಳದುರ್ಗದ ಸೆರೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ದರು. ಕಡೆಗೆ ಹೈದರನ ಆದೇಶದಂತೆ ಬೈರಾಪಟ್ಟಣ ಎಂಬ ಊರಿನ ಬಳಿ ಆಲದ ಮರವೊಂದಕ್ಕೆ ಅವರನ್ನು ನೇಣು ಹಾಕಿ ಕೊಲ್ಲಲಾಯಿತು. ಇತ್ತ ಬಂಧನದಲ್ಲಿದ್ದ ದೊರೆಗೆ ವಿಷಪ್ರಾಷನವಾಗಿ ಅವನೂ ಕೂಡ ಮರಣ ಹೊಂದಿದನು.

 

ದೊಡ್ಡ ಮೆದಕೇರಿನಾಯಕ:

ದೊಡ್ಡಮೆದಕೇರಿನಾಯಕನನ್ನು ದಿವಾನ್ ಪೂರ್ಣಯ್ಯ ಮತ್ತಿತರರ ಸಲಹೆಯಂತೆ ಹೈದರನ ಸೆರೆಯಿಂದ ಬಿಡಿಸಿ, ಒಂದು ಭಾರಿ ಸೈನ್ಯಕ್ಕೆ ಅವನನ್ನು ದಳಪತಿಯನ್ನಾಗಿ ಮಾಡಿ ಮಲೆಯಾಳದ ರಾಜಕೀಯ ಕ್ಷೋಭೆಯನ್ನು ನಿಯಂತ್ರಿಸಲು ಕಳುಹಿಸಿಕೊಟ್ಟರು. ದೊಡ್ಡಮೆದಕೇರಿನಾಯಕನು ಸ್ವಲ್ಪ ದಿನಗಳ ಕಾಲ ಕಲ್ಲಿಕೋಟೆಯಲ್ಲಿ ನೆಲೆಸಿದನು. ಹೈದರನ ಮರಣಾನಂತರ ಅಧಿಕಾರಕ್ಕೆ ಬಂದ ಟಿಪ್ಪುಸುಲ್ತಾನನು ಕೆಲವರ ಚಾಡಿ ಮಾತು ಕೇಳಿ ಮೆದಕೇರಿನಾಯಕನನ್ನು ಕೊಲ್ಲಿಸಲು ಇಲ್ಲವೇ ಖೋಜಾ (ನಪುಂಸಕ) ಮಾಡಲು ಪ್ರಯತ್ನಿಸಿದನು. ಈ ಸಂಗತಿಯನ್ನು ಹೇಗೋ ತಿಳಿದ ದೊಡ್ಡಮೆದಕೇರಿನಾಯಕನು ತಿರುವನಂತಪುರದ ರಾಮವರ್ಮ ಮಹಾರಾಜನಲ್ಲಿಗೆ ಹೋಗಿ ಆಶ್ರಯ ಪಡೆದನು. ಮುಂದೆ ಟಿಪ್ಪು ವಿರುದ್ಧವಾಗಿ ಬ್ರಿಟೀಷರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ಸೈನಿಕ ಕಾರ್ಯಾಚರಣೆ ಕೈಗೊಂಡಾಗ ರಾಮವರ್ಮನ ಸಲಹೆಯಂತೆ ಬ್ರಿಟಿಷರಿಗೆ ನೆರವಾದನು. ಟಿಪ್ಪುಸುಲ್ತಾನನು ಮೃತನಾಗಿ ಮೈಸೂರು ಬ್ರಿಟಿಷರ ವಶವಾದಾಗ ಇವನಿಗೆ ಚಿತ್ರದುರ್ಗದ ಸಂಸ್ಥಾನವನ್ನು ಮರಳಿಸುವಂತೆ ದಿವಾನ್ ಪೂರ್ಣಯ್ಯನಿಗೆ ಬ್ರಿಟೀಷರು ಆದೇಶಿಸಿದರು. ಆದರೆ ದಿವಾನ್ ಪೂರ್ಣಯ್ಯ ತಾತ್ಕಾಲಿಕ ರಾಜವೇತನವನ್ನು ನಿಗಧಿಪಡಿಸಿ, ಕಾಲ ನೂಕುತ್ತಾ ಬಂದನು. ಕಡೆಗೆ ಅದೇ ಸ್ಥಿತಿ ಖಾಯಂ ಆಗಲು, ದೊಡ್ಡಮೆದಕೇರಿನಾಯಕನು ಮೈಸೂರನ್ನು ಬಿಟ್ಟು ಚಿತ್ರದುರ್ಗಕ್ಕೆ ಸಂಸ್ಥಾನಕ್ಕೆ ಸೇರಿದ ದೊಡ್ಡೇರಿ ತಾಲ್ಲೂಕಿನ ಚಳ್ಳಕೆರೆ ಬಂದು ನೆಲೆಸಿದನು. ಕೊನೆಯ ಕಾಲದಲ್ಲಿ ಮಗ ಕಾಟಪ್ಪನಾಯಕನಿಗೆ ಸ್ಥಾನಾಧಿಪತ್ಯವನ್ನು ಕೊಟ್ಟು ಕ್ರಿ.ಶ. 1825ರಲ್ಲಿ ಚಳ್ಳಕೆರೆಯಲ್ಲಿಯೇ ಕೊನೆಯುಸಿರೆಳೆದನು. ಚಿತ್ರದುರ್ಗ ಸಂಸ್ಥಾನವೇನಾದರೂ ಮರಳಿ ದೊರೆತಿದ್ದರೆ, ದುರ್ಗದ ಚರಿತೆ ಬೇರೆಯದೆ ತಿರುವನ್ನು ಪಡೆಯುತ್ತಿತ್ತು. ಆದರೆ ಅದಕ್ಕೆ ಅವಕಾಶವಾಗಲಿಲ್ಲ.


(ಆಧಾರ: ದುರ್ಗಶೋಧನ – ಬಿ.ರಾಜಶೇಖರಪ್ಪ)

.....

© 2011 www.chitharadurga.com. Best fit for 1024 X 768 Resolution.