ಮೊಳಕಾಲ್ಮೂರು ತಾಲ್ಲೂಕಿನ ಸಾಂಸ್ಕೃತಿಕ ನೆಲೆಗಳು
ನುಂಕಿಮಲೆ: ಅರ್ಜುನ ಜೋಗಿಗಳ ಸಾಂಸ್ಕೃತಿಕ ನೆಲೆ:
ಮೊಳಕಾಲ್ಮೂರು ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದ ನುಂಕಿಮಲೆಯಲ್ಲಿ ಭೈರವನ ಪ್ರಾಚೀನ ನೆಲೆಯೊಂದು ಬೆಟ್ಟದ ಮೇಲಿದೆ. ಇದು ವರ್ಣರಂಜಿತ ಅಲಂಕಾರದ ಅರ್ಜುನ ಜೋಗಿಗಳ ಸಾಂಸ್ಕೃತಿಕ ನೆಲೆಯಾಗಿದ್ದು, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಜಮಾಯಿಸುವ ಇವರ ತಂಡಗಳು ಕಣ್ಣಿಗೆ ಹಬ್ಬ.
ಕಂಪಳದೇವರ ಹಟ್ಟಿ (ಚಿಕ್ಕಕುಮ್ತಿ):
ಮೊಳಕಾಲ್ಮೂರು ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕಂಪಳದೇವರಹಟ್ಟಿ ಎಂದು ಕರೆಯಲ್ಪಡುವ ಚಿಕ್ಕಕುಮ್ತಿ ಎಂಬ ಗ್ರಾಮ ಮ್ಯಾಸಬೇಡರ ಇನ್ನೊಂದು ಪ್ರಮುಖ ನೆಲೆ. ಬೇಟೆ ಸಂಸ್ಕೃತಿಗೆ ಸೇರಿದ ಮ್ಯಾಸಬೇಡರು ಒಂದು ಕಾಲಕ್ಕೆ ಪಶುಪಾಲಕ ಸಂಸ್ಕೃತಿಯ ಮೂಲಕ್ಕೆ ಸೇರಿದ್ದರು ಎಂಬುದನ್ನು ಈ ದೇವರ ಜಾತ್ರೆಯಲ್ಲಿ ನಡೆಯುವ ಆಚರಣೆಗಳು ಸಾಬೀತುಪಡಿಸುತ್ತದೆ. ಇಲ್ಲಿ ದೇವರ ಹೆಸರಿನಲ್ಲಿ ಬಿಟ್ಟ ನೂರಾರು ದನಗಳಿದ್ದು, ಇವನ್ನು ಕಾಯುವ ಪವಿತ್ರ ಕಾಯಕ ಮಾಡುವವನ್ನು “ಕಿಲಾರಿ” ಎಂದು ಕರೆಯುತ್ತಾರೆ. ಬರಗಾಲದಲ್ಲಿ ಮಾತ್ರ ಊದಬಹುದಾದ ಒಂದು ವಿಶಿಷ್ಟ ಗಣೆಯೂ ಇಲ್ಲಿದೆ.
(ಆಧಾರ: “ದುರುಗ ಜಾನಪದ”– ಡಾ||ಮೀರಾಸಾಬಿಹಳ್ಳಿ ಶಿವಣ್ಣ)
|