|
|
|||||||||||
![]() |
ಜಾನಪದ |
![]() |
|||||||||
|
|||||||||||
|
ಬನಸಿಹಳ್ಳಿಯ ಏಕನಾಥೇಶ್ವರಿ ದೇವಾಲಯ ಚಿತ್ರದುರ್ಗದ ಕೋಟೆಯ ದೊರೆಯಾಗಿದ್ದ ವೀರ ಮೆದಕೇರಿನಾಯಕನ ದುಟ್ಟೂರು ಹೊಸದುರ್ಗದ ಜಾನಕಲ್ಲು ಗ್ರಾಮ. ಒಂದು ಕಾಲದಲ್ಲಿ ಈ ಗ್ರಾಮ ಸೀಮೆಯು ಅರಣ್ಯ ಪ್ರದೇಶವಾಗಿದ್ದಿರಬಹುದಾದ ಬನಸಿಹಳ್ಳಿ (ಬನದರಸಿಹಳ್ಳಿ) ದುರ್ಗದ ಪಾಳೆಯಗಾರರ ರಾಜದೇವತೆಯಾದ ಉಚ್ಚಂಗಮ್ಮ ಅಥವಾ ಏಕನಾಥೇಶ್ವರಿಯ ಮತ್ತೋಡು ನೆಲೆವೀಡಾಗಿದೆ. ಬನಸಿಹಳ್ಳಿಯ ವನಸಿರಿಗೆ ಮನಸೋತು ಏಕನಾಥಿ ಇಲ್ಲಿ ನೆಲೆಸಿರಬಹುದು, ಅಥವಾ ದುರ್ಗದ ದೊರೆ ವೀರ ಮೆದಕೇರಿನಾಯಕನು, ದುರ್ಗದಲ್ಲಿ ಈ ದೇವತೆಯ ದೇವಾಲಯ ಇರುವಂತೆಯೇ, ತನ್ನ ತವರೂರಾದ ಜಾನಕಲ್ಲುದುರ್ಗದ ಸನಿಹದಲ್ಲಿಯೂ (ಏಕನಾಥಿ ದೇವಾಲಯ) ಇರಲೆಂಬ ಮಹಾದಾಶಯದಿಂದ ಇಲ್ಲಿ ಗುಡಿ ಕಟ್ಟಿಸಿರಬೇಕು. ಬನಸಿಹಳ್ಳಿಯ ಏಕನಾಥೇಶ್ವರಿಯನ್ನು ಜನರು ‘ಪಾರ್ವತಿದೇವಿ’ ಎಂತಲೂ ಕರೆಯುತ್ತಾರೆ. ಊರ ಹೊರಗಿನ ಕಲ್ಲುಮಟ್ಟಿಯ ಪಕ್ಕದಲ್ಲಿ ಏಕನಾಥೇಶ್ವರಿಯ ಮೂಲವಿಗ್ರಹವಿರುವ ತ್ರಿಕೂಟಚಲ ದೇವಾಲವಿದ್ದು, ನವರಂಗದ ಹಿಂಭಾಗಕ್ಕಿರುವ (ಮಧ್ಯದ) ಗರ್ಭಗುಡಿ (ಹುಟ್ಟುಬಂಡೆಗಳಿಂದಾದ ಗುಹಾಮಂದಿರ) ಹಾಗೂ ನವರಂಗದ ಎಡಕ್ಕೆ ಮತ್ತು ಬಲಕ್ಕೆ ಒಂದೊಂದು ಗರ್ಭಗುಡಿಗಳನ್ನು ಒಳಗೊಂಡಿದೆ. ಮಧ್ಯದ ಗರ್ಭಗುಡಿಯಲ್ಲಿರುವ ಏಕನಾಥಿ ದೇವಿಯ ರುಂಡ ವಿಗ್ರಹ ರುದ್ರರಮಣಿಯವಾಗಿದೆ. ಬಲಗಡೆಯ ಗರ್ಭಗುಡಿಯಲ್ಲಿ ಪರಶುರಾಮ ವಿಗ್ರಹವು ಅತ್ಯಂತ್ಯ ಕಲಾತ್ಮಕವಾಗಿದೆ. ಎಡಭಾಗದ ಗರ್ಭಗುಡಿಯಲ್ಲಿ ಭೈರವನ ವಿಗ್ರಹವಿದೆ. ಗುಡಿಯ ಸುತ್ತ ದೊಡ್ಡ ಪ್ರಾಕಾರವಿದ್ದು, ಮುಂಭಾಗದಲ್ಲಿ ಮಾತಂಗಿ ಮತ್ತು ಮಾರಾಳಿಯವರ ಪುಟ್ಟ ಗುಡಿಗಳಿವೆ. ದೇವಾಲಯದ ಎಡಮಗ್ಗುಲಲ್ಲಿ ಪುಟ್ಟಕೊಳವಿದ್ದು, ಮಳೆಗಾಲದಲ್ಲಿ ನೀರಿನಿಂದ ತುಂಬಿ ಶೋಭಿಸುತ್ತದೆ. ಗುಡಿಯ ಎದುರಿನ ಹೊಲದಲ್ಲಿ ದೇವಿಯ ಭಕ್ತರು ‘ಸಿಡಿ’ ಆಡುವ ತಿರುಗಣಿ ಕಂಬವಿದೆ. ಗುಡಿಯೆದುರಿಗಿನ (ಬಲಗಡೆ) ಕಲ್ಲು ಮಟ್ಟಿಯಲ್ಲಿ ಸದಾ ಎದೆಮಟ್ಟ ‘ಜಲ’ವಿರುವ ಗಂಗೆದೋಣಿ ಇದೆ. ‘ಅಮ್ಮ’ನವರ ಪಾದ ಸಹ ಇಲ್ಲಿದೆ. (ಆಧಾರ: “ಹೊಸದುರ್ಗ ಸೀಮೆ ಜಾನಪದ”– ಬಾಗೂರು ನಾಗರಾಜಪ್ಪ |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||