|
|
|||||||||||
![]() |
ಜಾನಪದ |
![]() |
|||||||||
|
|||||||||||
ಚಳ್ಳಕೆರೆಯಿಂದ ಈಶಾನ್ಯಕ್ಕೆ 30 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಗ್ರಾಮ. ಇಲ್ಲಿಯ ಮಾರಿ ಉಗ್ರಸ್ವರೂಪಿ ಅಲ್ಲ. ಪ್ರಸನ್ನ ಗೌರಿ. ಅದಕ್ಕೆ ಈ ಹಳ್ಳಿಗೆ ಗೌರಸಮುದ್ರ ಎಂಬ ಹೆಸರು ಬಂದಿರುವುದು. ಈಕೆಯ ಮೂಲನೆಲೆ ಗೌರಸಮುದ್ರದಿಂದ 3 ಕಿ.ಮೀ. ದೂರವಿರುವ “ತುಮ್ಮಲು”. ಈಕೆಯ ಜಾತ್ರೆ ನಡೆಯುವುದು ಇಲ್ಲಯೇ. ನಾಯಕನಹಟ್ಟಿ ಹೊರತುಪಡಿಸಿದರೆ ಸಾವಿರಾರು ಜನ ಸೇರುವ ಈ ತಾಲ್ಲೂಕಿನ ಬಹುದೊಡ್ಡ ಜಾತ್ರೆ ಎಂದರೆ ಇದೆ. ಈಗ ತುಂಬಲು ಎಂದು ಕರೆಯುವ ಜಾಗದಲ್ಲಿ ಹಿಂದೆ ಮೇಲುಸಕ್ಕರೆಯವರು (ಉಪ್ಪಾರ) ಗಾರೆಗಚ್ಚಿನ ಗುಂಡಿಗಳಲ್ಲಿ ಉಪ್ಪು ಉತ್ಪಾದಿಸುತ್ತಿದ್ದರು. ಒಂದು ದಿನ ಗಾರೆಗಚ್ಚಿನ ಗುಂಡಿಯಲ್ಲಿ “ಸೆಜಲು” ಕಾಣಿಸಿಕೊಂಡು ಉಪ್ಪಿನ ತಯಾರಿಗೆಂದು ಹಾಕಿದ್ದ ಉಪ್ಪು ನೀರು ಮಾಳೆಯಲ್ಲಿ ಇಳಿದು ಹೋಯಿತು. ಸೆದಲಿನ ಭಾಗವನ್ನು ಸಂಪೂರ್ಣ ಎಬ್ಬಿಹಾಕಿ, ಗುಂಡಿ ಸರಿಮಾಡಿ, ಮತ್ತು ಉಪ್ಪು ನೀರು ಹಾಕಿದರೂ ಮರುದಿನ ಸೆದಲು ಬೃಹದಾಕಾರವಾಗಿ ಹುತ್ತವಾಗಿ ಬೆಳೆದಿತ್ತು! ಉಪ್ಪಾರರು ಹೆದರಿ “ಹೊತ್ತಿಗೆ” ತೆಗೆಸಿದಾಗ ದೇವಿ ಒಲಿದಿರುವ ಭವಿಷ್ಯ ತಿಳಿಯಿತು. ಆಗ ಅವರು ಆ ಹುತ್ತವನ್ನೇ ಮಾರಮ್ಮನೆಂದು ಪಕ್ಕದಲ್ಲಿ ಗದ್ದಿಗೆ ಮಾಡಿ ಪೂಜಿಸತೊಡಗಿದರು. ತಾವು ಉಪ್ಪಿನ ಮಾಳೆಯನ್ನು, ಉಪ್ಪು ಎಬ್ಬಲು ಬಳಸುತ್ತಿದ್ದ ಕುರ್ಪಿ ಮತ್ತು ಸನಿಕೆಯ ತಗಡನ್ನೇ ಒಂದು ಬುಟ್ಟಿಯಲ್ಲಿಟ್ಟು ಅದನ್ನೇ ದೇವರು ಮಾಡಿ ಊರಿನೊಳಗೆ ಕಾವಸೆ ಗುಡಿಯಲ್ಲಿ (ಇಂದು ಭವ್ಯಕಟ್ಟಡ ಇದೆ) ಇಟ್ಟು ಪೂಜಿಸತೊಡಗಿದರು. ಈ ವಸ್ತುಗಳನ್ನು ಇದುವರೆಗೂ ಯಾರು ಕಣ್ಣಾರೆ ಕಂಡಿಲ್ಲ. ಪೂಜಾರಿ ಕೂಡ ವರ್ಷಕ್ಕೊಮ್ಮೆ ಇದನ್ನು ಶುದ್ಧಿ ಮಾಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾನೆ! ಕಾಡುಗೊಲ್ಲರ ಸಾಂಸ್ಕೃತಿಕ ವೀರರಾದ ‘ಎತ್ತಪ್ಪ-ಜುಂಜಪ್ಪ’ನವರ ಬದುಕಿನಲ್ಲಿ ಈಕೆ ಒತ್ತಾಸೆಯಾಗಿ ನಿಂತು ಅವರನ್ನು ಕಾಪಾಡಿದ ವಿವರಗಳು ಜನಪದ ಕಾವ್ಯಗಳಲ್ಲಿ ಕಾಣಬಹುದು. ಗೌರಸಮುದ್ರ ಹಿಂದೆ ಮ್ಯಾಸಬೇಡರ ಒಂದು ಮುಖ್ಯ ನೆಲೆಯಾಗಿತ್ತು ಹಾಗೂ ಕಟ್ಟೆಮನೆಯಾಗಿತ್ತು. ಆಗ ಇದನ್ನು “ಐವೋಜಿ ಮಠ” ಎಂದು ಕರೆಯುತ್ತಿದ್ದರು. ಹಿಂದೆ ‘ಅಮ್ಮ(ಮಾರಮ್ಮ, ಕಾಲರಾ, ಪ್ಲೇಗು, ಸಿಡುಬಿನ ದೇವತೆಯಾಗಿರುವುದರಿಂದಲೇ ‘ಸಿಡುಬ’ನ್ನು “ಅಮ್ಮ” ಎಂದು ಕರೆಯಲಾಗುತ್ತದೆ)’ ಎದ್ದವರನ್ನು ಉಪ್ಪಿನ ಹಾಸಿಗೆಯ ಮೇಲೆ ಮಲಗಿಸಿ ಬೇವಿನ ಸೊಪ್ಪಿನಿಂದ ಮುಚ್ಚುತ್ತಿದ್ದರಂತೆ. ಈಕೆಗೆ ಬೇವಿನಮರ ಪ್ರಿಯವಾದ್ದರಿಂದ ಈಕೆ ಬೇವಿನ ಮರಗಳನ್ನು ಸಹ ‘ಮಾರಮ್ಮ’ನ ಪ್ರತಿರೂಪವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈಕೆಗೆ ಬೇವಿನ ಸೀರೆ, ಬಾಯಿಬೀಗದ ಸೇವೆಗಳು, ಅತ್ಯಂತ್ಯ ಪ್ರಿಯ. ಈಕೆಗೆ ಜಾತ್ರೆ ಭಾದ್ರಪದ ಮಾಸದ ಮೊದಲ ಮಂಗಳವಾರ (ಗಣೇಶ ಚತುರ್ಥಿ ಹಬ್ಬದ ಹತ್ತಿರದಲ್ಲಿ) ನಡೆಯುತ್ತದೆ. ಸಾವಿರಾರು ಕುರಿಗಳ ಬಲಿ ನಡೆಯುತ್ತದೆ. ಆದರೆ ಜಾತ್ರೆ ಸಂಜೆಯೊಳಗೆ ಮುಗಿದುಬಿಡುತ್ತದೆ. ಸಂಜೆಯಾದ ನಂತರ ಒಂದು ನರಪಿಳ್ಳೆಯೂ ತುಮ್ಮಲಿನಲ್ಲಿ ಇರುವುದಿಲ್ಲ. ಇದ್ದರೆ ರಕ್ತಕಾರಿ ಸಾಯುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ “ಮಧ್ಯಾಹ್ನದ ಮಾರಮ್ಮ”ನೆಂದೇ ಪ್ರಸಿದ್ದಿಯಾಗಿದ್ಧಾಳೆ. (ಆಧಾರ: “ಮ್ಯಾಸಮಂಡಲ”- ಡಾ||ಮೀರಾಸಾಬಿಹಳ್ಳಿ ಶಿವಣ್ಣ) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||