|
|
|||||||||||
![]() |
ಜಾನಪದ |
![]() |
|||||||||
|
|||||||||||
ಕಾಡುಗೊಲ್ಲರ ಪಂಚಲಿಂಗಗಳಲ್ಲೊಂದಾದ “ಕ್ಯಾತಲಿಂಗ”ನ ಜಾತ್ರೆಯಲ್ಲಿ ನಡೆಯುವ ‘ಕಳಸ ಕೀಳೂದು’ ಎಂಬ ಆಚರಣೆ, ವಿಶಿಷ್ಟ ಜನಪದ ಆಚರಣೆಗಳಲ್ಲೊಂದು. ಜನಗಳ ಬಾಯಿಯಲ್ಲಿ ಕ್ಯಾತಲಿಂಗನನಾಗಿರುವ ಈ ದೇವರ ಮೂಲ ಕೇದಾರಕ್ಕೆ ಆರೋಪಿಸುತ್ತಾರೆ. ಕೇದಾರದಿಂದ ಬಂದ ಲಿಂಗನಾದ್ದರಿಂದ ಇದು ಕೇದಾರಲಿಂಗ, ಕೇತಾರಲಿಂಗ, ಕೇತರಲಿಂಗ, ಕೇತೆಲಿಂಗ, ಕ್ಯಾತೆಲಿಂಗನಾಗಿ ಕೊನೆಗೆ ಆಡುನುಡಿಯಲ್ಲಿ ಕ್ಯಾತಪ್ಪನಾಗಿ ಜನಮನಗಳಲ್ಲಿ ನೆಲೆಸಿದ್ದಾನೆ. ಹೀಗಾಗಿ ಈತನ ಜಾತ್ರೆಯು ಗ್ರಾಮೀಣರದಲ್ಲಿ ‘ಪರಿಸೆ’ಯಾಗಿ ಪರಿಣಮಿಸಿ ಇದು ಕ್ಯಾತಪ್ಪನ ಪರಿಷೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿಯಲ್ಲಿ ನೆಲೆಸಿರುವ ಈ ದೇವರಿಗೆ ಹುರುಳಿ, ನವಣೆ ಸೇರುವುದಿಲ್ಲ. ಹೀಗಾಗಿ ಈ ಜಾತ್ರೆ ನಡೆಯುವಷ್ಟು ಕಾಲ ಈ ದೇವರ ಒಕ್ಕಲಿನವರು ತಮ್ಮ ಮನೆಯೊಳಗೆ ಹುರುಳಿ-ನವಣೆಗಳನ್ನು ಇಟ್ಟುಕೊಳ್ಳುವಂತಿಲ್ಲ. ಬಹಳ ಕಟ್ಟುನಿಟ್ಟಿನ ಸೂತಕದ ಈ ದೇವರಿಗೆ ವಿದ್ಯುತ್ ಆಗುವುದಿಲ್ಲ. ಹೀಗಾಗಿ ಈ ದೇವರನ್ನು ವಿದ್ಯುತ್ ತಂತಿಯ ಕೆಳಗೂ ಕೊಂಡೊಯ್ಯವಂತಿಲ್ಲ! ಈ ದೇವರಿಗೆ ಮೊದಲೆ ಹುರುಳಿ-ನವಣೆ ಆಗದಿರುವುದರಿಂದ ಹುರುಳಿ-ನವಣೆ ಹೊಲಗಳ ಮೇಲೂ ಕೊಂಡೊಯ್ಯವಂತಿಲ್ಲ! ಕಾಲಿಗೆ ಚಪ್ಪಲಿಯನ್ನು ಧರಿಸುವಂತಿಲ್ಲ! ಸುಮಾರು ತಿಂಗಳುದ್ಧಕ್ಕೂ ಅನೇಕ ವಿಶಿಷ್ಟ ಸಂಪ್ರದಾಯಗಳೊಡನೆ ನಡೆಯುವ ಜಾತ್ರೆಗೆ ಶಿಖರತೆ ಪ್ರಾಪ್ತವಾಗುವುದು ಕಳ್ಳೆಯ ರಾಶಿಯ ತುದಿಯಲ್ಲಿ ಸಿಕ್ಕಿಸಿರುವ ಕಂಚಿನ ಕಳಸವನ್ನು ಕೀಳುವುದರ ಮೂಲಕವೇ! ಕ್ಯಾತೇಲಿಂಗ ದೇವರು ತನ್ನ ಅನೇಕ ಪರಿವಾರದ ದೇವರುಗಳೊಂದಿಗೆ ಚನ್ನಮ್ಮನಾಗತಿಹಳ್ಳಿಯಿಂದ ಹೊರಟು ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಪುರ್ಲಹಳ್ಳಿ ಬಳಿಯ ವಸತಿ ದಿಬ್ಬಕ್ಕೆ ಬರುತ್ತದೆ. ದೇವರು ಇಲ್ಲಿಗೆ ಬರುವ ಹಿಂದಿನ ದಿನವೇ ಒಕ್ಕಲಿನವರೆಲ್ಲ ಸೇರಿ “ಮರವಾಯಿ”ಯ (ದೇವರಿಗೆ ಅಗತ್ಯವಾದ ಕಳ್ಳೇಮರವನ್ನು ಕಡಿಯುವ ಹಕ್ಕಿನ ಬಾಬಿನವನು) ನೇತೃತ್ವದಲ್ಲಿ, ಎತ್ತಿನ ಬಂಡಿಗಳನ್ನು ಹೊಡೆದುಕೊಂಡು ‘ಒಂದ್ಹೊತ್ತಿನಲ್ಲಿ (ಊಟ ಮಾಡದೇ) ಕಾಡಿಗೆ ಹೋಗುತ್ತಾರೆ. ಅಲ್ಲಿ ಸಿಗಬಹುದಾದ ಎಲ್ಲಾ ಬಗೆಯ ಕಳೆಕಂಟಗಳನ್ನು ಕಡಿದು ಗಾಡಿಯಲ್ಲಿ ಹೇರಿಕೊಂಡು ವಸತಿ ದಿಬ್ಬಕ್ಕೆ ತಂದು ಹಾಕುತ್ತಾರೆ. ಕೆಲವು ‘ಗಳ (ಉದ್ದನೆಯ ಕೋಲು)’ಗಳಿಂದ ಹೊದಿಕೆ ಇಲ್ಲದ ಗುಡಿಸಲು ರೀತಿಯ ಗುಡಿ ತಯಾರು ಮಾಡಿರುತ್ತಾರೆ. ಈ ಗಳುವಿನ ತುದಿಯಲ್ಲಿ ಕಂಚಿನ ಕಳಸ ಸ್ಥಾಪಿಸಿ, ತಾವು ತಂದ ಕಳ್ಳೆಯನ್ನು ಈ ಗುಡಿಗೆ ಹೊದಿಸಿ “ಕಳ್ಳೆಗುಡಿ”ಯನ್ನು ನಿರ್ಮಿಸುತ್ತಾರೆ. ಈ ಕಳ್ಳೆಗುಡಿಯ ಒಳಕ್ಕೆ ಹೋಗಲು ಪೂರ್ವಭಾಗದಲ್ಲಿ ಒಂದು ಸಣ್ಣಬಾಗಿಲು ಬಿಟ್ಟಿರುತ್ತಾರೆ. ಇಲ್ಲಿ ಬಿಟ್ಟರೆ ಸುತ್ತಲೂ ಕಳ್ಳೆಯನ್ನು ಬಡಿದು ಮುಚ್ಚಿರುತ್ತಾರೆ. ವಸತಿ ದಿಬ್ಬಕ್ಕೆ ದೇವರನ್ನು, ಅದನ್ನು ಈ ಕಳ್ಳೆಗುಡಿಯೊಳಗೆ ಪ್ರತಿಷ್ಟಾಪಿಸಲಾಗುತ್ತದೆ. ಜನ ಕಳ್ಳೆಗುಡಿಯೊಳಕ್ಕೆ ತೂರಿಕೊಂಡು ಹೋಗಿ ದೇವರಿಗೆ ಹಣ್ಣು-ಕಾಯಿ ಮಾಡಿಸಿಕೊಂಡು ಬರುತ್ತಾರೆ. ಗುಡಿಯ ಹೊರಗೆ ಉರುಮೆ ವಾದ್ಯಗಳನ್ನು ನುಡಿಸುತ್ತಿರುತ್ತಾರೆ. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ “ಕಳಸ ಕೀಳುವ” ಹರಕೆ ಮಾಡಿಕೊಂಡು ಗೊಲ್ಲ ಜನಾಂಗದ ಗಂಡು ಭಕ್ತರು ಬರೀ ಚಡ್ಡಿಯಲ್ಲಿ ನೆರೆಯುತ್ತಾರೆ. ಎಲ್ಲರೂ ತಣ್ಣೀರು ಮುಳುಗಿ, ತಣ್ಣನೆ ಬಟ್ಟೆಯುಟ್ಟು ‘ಮಡಿ’ಯಲ್ಲಿ ಬಂದಿರುತ್ತಾರೆ. ಪೂಜಾರಿ ಕಳ್ಳೆ ಗುಡಿಯೊಳಗಿನಿಂದ ಬಂದು ಹೊರಬಂದು ಕಳ್ಳೇ ಹತ್ತಲಿರುವ ಭಕ್ತರಿಗೆ ತೀರ್ಥ ಚುಮುಕಿಸಿ ಅಪ್ಪಣೆ ಕೊಡುತ್ತಾನೆ. ಭಕ್ತಾಧಿಗಳು ಮೈಮೇಲೆ ಆವೇಶ ಬಂದವರಂತೆ ನಾ ಮುಂದು ತಾ ಮುಂದು ಎಂಬಂತೆ ರಾಶಿಯನ್ನು ಬರಿಗಾಲಿನಲ್ಲಿ ಹತ್ತಿ ಕಳಸವನ್ನು ಕೀಳುತ್ತಾರೆ. (ಆಧಾರ: “ಮ್ಯಾಸಮಂಡಲ”- ಡಾ||ಮೀರಾಸಾಬಿಹಳ್ಳಿ ಶಿವಣ್ಣ) |
|||||||||||
|
© 2008 www.chitharadurga.com. Best fit for 1024 X 768 Resolution. Created by Raghavendra.R & Bharatkumar.B.V. |
|||||||||||