ಚಿತ್ರದುರ್ಗದ ಜಿಲ್ಲೆಯ ಜಾನಪದ ವೀರರು
ಕಾಡುಗೊಲ್ಲರ ವೀರರು:
ಎತ್ತಪ್ಪ:
ಕಾಡುಗೊಲ್ಲರ ಮೊದಲ ಸಾಂಸ್ಕೃತಿಕ ವೀರನಾದ ಎತ್ತಪ್ಪ. ಕಾಡುಗೊಲ್ಲರಿಗೊಂದು ಸಾಂಸ್ಕೃತಿಕ ಸಂವಿಧಾನವನ್ನು ರಚಿಸಿಕೊಟ್ಟ ಪಶುಪಾಲಕ ಧರ್ಮವೀರ. ‘ಆವಿನ ಗೊಲ್ಲ ಕಾಣೆ ಎತ್ತಯ್ಯ, ನಾಡಿಗೆ ಚೆಲುವ ಕಾಣಿ’ ಎಂದು ಹೆಸರಾದ ಎತ್ತಯ್ಯನ ರೂಪಕ್ಕೆ ಮೋಹಿತಳಾದ ಬೇಡರ ಗುಡ್ಡದ ಬೋರಿ ಎತ್ತಯ್ಯನನ್ನು ವಶಪಡಿಸಿಕೊಳ್ಳಲು ನಾನಾ ಪ್ರಯತ್ನ ಮಾಡಿ ವಿಫಲಳಾಗಿ ತಲೆಯೋಡಿಸುತ್ತಾಳೆ. ಎತ್ತಯ್ಯನ ಸಮಾಧಿ ಚಳ್ಳಕೆರೆ ತಾಲ್ಲೂಕಿನ ತಳುಕಿನ ಗುಡ್ಡದಲ್ಲಿದೆ. ಪ್ರತಿವರ್ಷ ದನಗಾಹಿಗಳು ‘ಹಾಲು ಹರಿಸೇವೆ (ಹಾಲರಿ ಸ್ಯಾವೆ)’ ಒಪ್ಪಿಸುತ್ತಾರೆ. ಹಿರಿಯೂರು ತಾಲ್ಲೂಕಿನಲ್ಲಿ ವೇಣುಕಲ್ಲುಗುಡ್ಡದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಮಲ್ಲಜ್ಜ:
ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ (ಈ ಹಿಂದೆ) ತೋರಣಗಟ್ಟೆಯಲ್ಲಿ ಕೇವಲ 150 ವರ್ಷದ ಹಿಂದೆ ಆಗಿಹೋದ ಮಹಾನ್ ಪಶುಪಾಲಕ ಶಾಸ್ತ್ರ-ಜ್ಯೋತಿಷ್ಯಗಳನ್ನು ಸುಳ್ಳೆಂದು ಖಂಡಿಸಿ, ತಿರುಪತಿ ಯಾತ್ರೆಯನ್ನು ಹೊರಟವರನ್ನು ಬಿಡಿಸಿ, ತಾವಿರುವ ಜಾಗವೇ ತಿರುಪತಿ, ವೈಕುಂಠವೆಂದು ತೋರಿಸಿದನು. ಅನೇಕ ಪವಾಡಗಳನ್ನು ಮಾಡಿದನು.
ಭರಮಗಿರಿ ಈರಣ್ಣ:
ತಾನು ಕರೆದ ಗೋವಿನ ಹಾಲು ತುರುಕರು (ಮುಸ್ಲಿಂ) ಮುಟ್ಟಿದರೆ ಅಪವಿತ್ರವಾಗುತ್ತದೆ ಎಂದು ಕರೆದ ಹಾಲನ್ನೆ ಕುಡಿದು ಸತ್ತವನು.
ಹಂದಿ ಸಿರಿಯಣ್ಣ:
ಪಶುಪಾಲನೆಯ ಸಂಧರ್ಭದಲ್ಲಿ ಹಂದಿಯಿಂದ ಹತನಾದವನು.
ದೇವರ ಮಾರಪ್ಪ:
ದೇವರೆಂದರೆ ಗೊಲ್ಲರಿಗೆ ಇರುವಷ್ಟು ಆಸೆ ಇನ್ಯಾರಿಗೂ ಇಲ್ಲ. ದೇವರ ಭರಣಿಯನ್ನು ತರಲು ಸರ್ವಸ್ವವನ್ನು ಕಳೆದು ಕೊಂಡನು.
ಸಾಣೀಕೆರೆ ಗಟ್ಟಣ್ಣ:
ಕುರಿ ಮೇಯಿಸುವಾದ ತೋಳಗಳ ಗುಂಪಿಗೆ ಬಲಿಯಾದವನು.
ಬಿಕ್ಕಲತಿಪ್ಪೆ ಈರಣ್ಣ, ಬಂಜಗೆರೆ ಈರಣ್ಣ, ಮದನಕುಂಟೆ ಯರ್ರಪ್ಪ, ಮುಂತಾದ ವೀರರೆಲ್ಲ ಬೇಡ ಹೆಣ್ಣುಗಳ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ತಲೆಯೊಡಿಸಿಕೊಂಡು ಸತ್ತವರು. ಗಂಡನ ಶಂಕೆಗೆ ಒಳಗಾಗಿ ಕೊಂಡ ಬಿದ್ದ ಕಾಟವ್ವ, ಪಾತಿವ್ರತ್ಯ ಸಾರಲು ಕೊಂಡ ಸೇರಿದ ಈರತಿಮ್ಮವ್ವನಂತಹ ಮಹಿಳೆಯರೂ ಇದ್ದಾರೆ. ಮಳೆಗಾಗಿ ತಲೆಯೊಪ್ಪಿಸಿದ ಗೌನಳ್ಳಿ ಕರುವಿನ ಮಲ್ಲಪ್ಪನಂತಹ ದನಗಾಹಿಗಳು ಇದ್ದಾರೆ. ಕಾಡುಗೊಲ್ಲರ ಬಹಳಷ್ಟು ಈರಗಾರರಲ್ಲಿ ವಿಷಾಹಾರಿ ದೇವತೆಗಳೆಂದೇ ಹೆಸರಾದ ಜನಪದ ವೀರರಿದ್ದಾರೆ.
(ಆಧಾರ: “ದುರುಗ ಜಾನಪದ” – ಡಾ||ಮೀರಾಸಾಬಿಹಳ್ಳಿ ಶಿವಣ್ಣ)
|