FOLKLORE OF CHITRADURGA
ದಿನಾಂಕ:
 

ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳು

 

ಚಿತ್ರದುರ್ಗ ಜಿಲ್ಲೆ ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಸಾಂಸ್ಕೃತಿಕ ಕುತೂಹಲಗಳಲ್ಲಿ ಬುಡಕಟ್ಟುಗಳೂ ಒಂದು. ಈ ಜಿಲ್ಲೆಯಲ್ಲಿ ಕೆಲವೇ ಕೆಲವು ಬುಡಕಟ್ಟುಗಳನ್ನು ಗುರುತಿಸಬಹುದು. ಪ್ರಧಾನವಾಗಿ ಮ್ಯಾಸಬೇಡರು, ಕಾಡುಗೊಲ್ಲರು ಮತ್ತು ಲಂಬಾಣಿಗಳನ್ನು ಬುಡಕಟ್ಟುಗಳನ್ನು ಎಂದು ಪರಿಗಣಿಸಬಹುದು. ನಾವು ಬುಡಕಟ್ಟುಗಳಿಂದು ವಿಶ್ಲೇಷಿಸ ಹೊರಟಿರುವ ಇವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಆರ್ಥಿಕ, ಸಾಮಾಜಿಕ ಮಾನದಂಡಗಳನ್ನು ಇಟ್ಟುಕೊಂಡು ವಿವಿಧ ಸವಲತ್ತುಗಳ ಅಡಿಗಳಲ್ಲಿ ಗುರುತಿಸಿವೆ. ಮ್ಯಾಸಬೇಡರನ್ನು ಮಾತ್ರ ಪರಿಶಿಷ್ಟ ಬುಡಕಟ್ಟು (ಪ.ಪಂ) ಎಂತಲೂ, ಕಾಡುಗೊಲ್ಲರನ್ನು ಹಿಂದುಳಿದ ಬುಡಕಟ್ಟು (ಪ್ರ.ವರ್ಗ) ಮತ್ತು ಲಂಬಾಣಿಯವರನ್ನು ಪರಿಶಿಷ್ಟ ಜಾತಿ (ಪ.ಜಾ) ಎಂದು ಗುರುತಿಸಿದೆ.

 

 1)     ಮ್ಯಾಸಬೇಡರು:

ಇವರು ಅನ್ಯಜಾತಿ ಜನಗಳು ವಾಸಿಸುವ, ನಾಗರೀಕವಾದ ಹಳ್ಳಿ-ಪಟ್ಟಣಗಳಿಂದ ದೂರವಾಗಿ ಹೊರವಲಯದಲ್ಲಿ ತಮ್ಮದೇ ಜನಗಳಿಂದ ಕೂಡಿದ ಗುಂಪುಗಳಲ್ಲಿ, ಸಾಮಾನ್ಯವಾಗಿ ಹುಲ್ಲಿನ ಗುಡಿಸಲ್ಲಿ ವಾಸ ಮಾಡುತ್ತಿದ್ದ ನೆಲೆಗಳನ್ನು ಹಟ್ಟಿ ಎಂದು ಕರೆಯುತ್ತಾರೆ. ಗೋ ಸಂಸ್ಕೃತಿಗೆ ಸೇರಿದ ಇವರು ತಮ್ಮ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಬೇರೆ ಜನಗಳಿಂದ ದೂರವಾಗಿ ಹೀಗೆ ವಾಸ ಮಾಡುತ್ತಿದ್ದರು. ಕಾಡುಗೊಲ್ಲರಂತೆ ಹಟ್ಟಿಯ ಸುತ್ತ ಕಳ್ಳಿ ಬೇಲಿಯಿಂದ ಪಾರಿ ಬೇಲಿ (ಪಹರೆ ಬೇಲಿ)ಯನ್ನು ನಿರ್ಮಿಸಿಕೊಂಡಿರುತ್ತಾರೆ.

 

 2)     ಕಾಡುಗೊಲ್ಲರು:

ಪ್ರಾಚೀನ ಕಾಲದ ಕಾಡುಗೊಲ್ಲರ ಪ್ರಧಾನ ವೃತ್ತಿ ಪಶುಪಾಲನೆ. ಕ್ರಮೇಣ ಹುಲ್ಲುಗಾವಲು ಕಡಿಮೆಯಾಗುತ್ತಾ ಬಂದಂತೆ ಪಶುಪಾಲನೆ ಕ್ಷೀಣಿಸಿ ಇತ್ತೀಚೆಗೆ ಕುರಿ ಸಾಕಾಣಿಕೆಗೆ ಅಂಟಿಕೊಂಡಿದ್ದಾರೆ. ಸಹಜವಾಗಿ ತಮ್ಮ ವೃತ್ತಿಗೆ ಅನುಸಾರವಾಗಿ ಕಾಡಿನ ಮಧ್ಯೆ ವಾಸಿಸುತ್ತಿದ್ದರಿಂದ ಕಾಡುಗೊಲ್ಲರು (ಅಡವಿಗೊಲ್ಲರು) ಎಂದು ಕರೆಯಲಾಗುತ್ತಿದೆ. ನಾಗರೀಕ ವಸತಿಯಿಂದ ದೂರದ ಕಾಡುಗಳಲ್ಲಿದ್ದ ಈ ಜನ ಕಾಡುಪ್ರಾಣಿಗಳಿಂದ ತಮ್ಮನ್ನು, ತಮ್ಮ ಪಶುಸಂಪತ್ತನ್ನು ರಕ್ಷಿಸಿಕೊಳ್ಳಲು ಬೇಲಿ ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು.


(ಆಧಾರ: ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನದ ವ್ಯಾಪಕತೆ ಮತ್ತು ಸಾಧ್ಯತೆ ಪ್ರೋ.ಲಕ್ಷ್ಮಣ ತೆಲಗಾವಿ)

 

.....

© 2011 www.chitharadurga.com. Best fit for 1024 X 768 Resolution.