A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಕಲೆ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
'ಚಿತ್ರಕಲಾ'ದುರ್ಗ
'ಚಲನಚಿತ್ರ'ದುರ್ಗ
ಜಾನಪದ ಕಲೆಗಳು
ನಾಟ್ಯಕಲೆ

        

ಬಯಲು ಸೀಮೆಯಲ್ಲಿ ಭರತನಾಟ್ಯ ಕಲೆಯನ್ನು  ಪರಿಚಯಿಸಿ, ಬೆಳೆಸಿದ ಚಳ್ಳಕೆರೆಯ ನೃತ್ಯನಿಕೇತನ.

 

ವಿಶ್ವಶ್ರೇಷ್ಠವೆನಿಸಿದ ಭಾರತಿಯ ಸಾಂಸ್ಕೃತಿಕ ಪರಂಪರೆಯ ಉತ್ಕೃಷ್ಠ ಕಲಾ ಪ್ರಕಾರ ಭರತನಾಟ್ಯ. ಒಂದು ಕಾಲದಲ್ಲಿ ದೈವೀಕಲೆ ಎಂದೇ ಪರಿಗಣಿಸಲ್ಪಟ್ಟಿತ್ತು. ನಂತರದ ಕೆಲವು ಕಾಲಘಟ್ಟಗಳಲ್ಲಿ ಈ ಪ್ರಸಿದ್ಧ ಕಲೆ ಅವಸಾನದ ಅಂಚಿಗೂ ತಲುಪಿತ್ತು. ಆದರೆ ಅನೇಕ ಜನ ಶ್ರೇಷ್ಠ ಕಲಾವಿದರ ಕಷ್ಟ ಸಹಿಷ್ಣುತೆ, ಕಲಾಸಕ್ತಿ, ಪರಿಶ್ರಮಗಳಿಂದಾಗಿ ಭರತನಾಟ್ಯ ಕಲೆ ಮತ್ತೆ ಪ್ರಸಿದ್ಧಿಗೆ ಬಂತು.

 

          ಚಾರಿತ್ರಿಕ ಚಿತ್ರದುರ್ಗ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಂಥಾ ಜಿಲ್ಲೆ. ವಿಶಿಷ್ಠ ಜನಪದ ಕಲೆಗಳಿಗೆ ಹೆಸರಾದ ಈ ಜಿಲ್ಲೆಯಲ್ಲಿ ಶಾಸ್ತ್ರೀಯ ಭರತನಾಟ್ಯ ಕಲೆಯ ಬಗ್ಗೆ ಜನಮಾನಸದಲ್ಲಿ ಆಸಕ್ತಿ ಹುಟ್ಟಿಸಿದ್ದು ಚಳ್ಳಕೆರೆಯ ನೃತ್ಯನಿಕೇತನ ಸಾಂಸ್ಕೃತಿಕ ಶಿಕ್ಷಣಕೇಂದ್ರ. 1986 ಜನವರಿ 14ರ ಮಕರ ಸಂಕ್ರಮಣದಂದು ಪ್ರಾರಂಭಗೊಂಡ ನೃತ್ಯನಿಕೇತನ ಸಾಂಸ್ಕೃತಿಕ ಶಿಕ್ಷಣಕೇಂದ್ರ ಇಂದು ನಾಡಿನಾದ್ಯಂತ ಮನೆ ಮಾತಾಗಿದೆ, ಕಲಾವಿದರ ಅಪೂರ್ವ ಅಭಿನಯ, ಹೊಸ ಹೊಸ ನೃತ್ಯರೂಪಕಗಳ ಪ್ರಯೋಗದಿಂದಾಗಿ ಹೊರರಾಜ್ಯಗಳಲ್ಲೂ ಖ್ಯಾತಿಗಳಿಸಿದೆ. ಇದಕ್ಕೆ ಬಹುಮುಖ್ಯ ಕಾರಣ ಕೇಂದ್ರದ ಸ್ಥಾಪಕಿ ಹಾಗೂ ಶಿಕ್ಷಕಿಯಾದ ಗುರು ಸುಧಾಮೂರ್ತಿಯವರೆಂದರೆ ತಪ್ಪಾಗಲಾರದು. ಇವರು ಕೇವಲ ನೃತ್ಯ ಶಿಕ್ಷಕಿ ಮಾತ್ರ ಅಲ್ಲ. ಬಹುಮುಖ ಪ್ರತಿಭೆ ಹೊಂದಿದ ಇವರು ನಾಟ್ಯರಂಗದ ಎಲ್ಲಾ ಭಾಗಗಳನ್ನು ಬಲ್ಲವರಾಗಿದ್ದಾರೆ.

 

          ನಾಟ್ಯ ಕಲಿಸುವುದರ ಜೊತೆಗೆ ಸ್ವತಃ ನಟುವಾಂಗಂ, ಹಾಡುಗಾರಿಕೆ, ಪ್ರಸಾಧನ ಕಲೆ ಮತ್ತು ವೇಷ ಭೂಷಣಗಳ ತಯಾರಿಕೆ, ವೀಣೆ ಮತ್ತು ಹಾರ್ಮೋನಿಯಂ ವಾದನಗಳಲ್ಲೂ ಪರಿಣಿತರಾಗಿರುವ ಇವರು ನೃತ್ಯ ಸಂಯೋಜನೆಯಲ್ಲೂ ಪಾಂಡಿತ್ಯ ಹೊಂದಿದ್ದಾರೆ. ಸುಮಾರು 25 ಕ್ಕೂ ಹೆಚ್ಚು ರೂಪಕಗಳಿಗೆ ನೃತ್ಯ, ಸಂಗಿತ ಸಂಯೋಜನೆ ಮಾಡಿ, ತನ್ನ ಶಿಷ್ಯಂದಿರ ಮೂಲಕ ವೇದಿಕೆಯಲ್ಲಿ ಪ್ರದರ್ಶಿಸಿ ಅಪಾರ ಜನಮನ್ನಣೆ ಪಡೆದಿದ್ದಾರೆ. ಭರತನಾಟ್ಯ ಪ್ರದರ್ಶನಗಳಲ್ಲಿ ತಥಾಕಥಿತ ಸಾಂಪ್ರದಾಯಿಕತೆಯ ಜೊತೆಗೇ ವೈವಿಧ್ಯತೆಯನ್ನು ಅಳವಡಿಸಿಕೊಂಡು ನೃತ್ಯ ಕಾರ್ಯಕ್ರಮಗಳಿಗೆ ಹೊಸ ಮೆರುಗನ್ನು ನೀಡಿ, ಜನರನ್ನಾಕರ್ಷಿಸಿದ್ದು ಇವರ ಹೆಗ್ಗಳಿಕೆ. ಕರಾವಳಿಯ ಖಾತ್ಯ ನಾಟ್ಯಾಚಾರ್ಯ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್, ಮೈಸೂರು ಭಾರತೀಯ ನೃತ್ಯ ಕಲಾಪರಿಷತ್ ಸಂಸ್ಥಾಪಕರಾದ ವಿದ್ವಾನ್ ಎಂ.ವಿಷ್ಣುದಾಸ್ ಹಾಗೂ ವಿದ್ವಾನ್ ರಾಜರತ್ನಂ ಪಿಳ್ಳೆಯವರಂಥಾ ದಿಗ್ಗಜರಲ್ಲಿ ನಾಟ್ಯಾಭ್ಯಾಸ ಮಾಡಿದ ಸುಧಾಮೂರ್ತಿಯವರು ಕರ್ನಾಟಕದ ಸಂಗೀತದಲ್ಲೂ ಪರಿಣಿತಿ ಪಡೆದವರು. ವಿದ್ವಾನ್ ಗೋವಿಂದನ್, ವಿದುಷಿ ರಾಧಾಮುರುಳೀಧರ್ ಮತ್ತು ಕರ್ನಾಟಕ ' ಕಲಾಶ್ರೀ ' ವಿದ್ವಾನ್ ಬಿ.ಗುರುಸಿದ್ದಪ್ಪನವರಲ್ಲಿ ಸಂಗೀತ ತರಬೇತಿ ಪಡೆದಿದ್ದಾರೆ.

 

          ತಾವು ನೃತ್ಯ ಕಲಿಯುವ ಸಮಯದಲ್ಲೇ ಕರಾವಳಿಯ ವಿಶಿಷ್ಠ ಕಲೆಯೆನಿಸಿದ ಯಕ್ಷಗಾನ ಕಲೆಯನ್ನು ಶ್ರೀ ಉಪ್ಪಳಕೃಷ್ಣ ಮಾಸ್ತರ್ ಇವರಿಂದ ಕಲಿತರು,. ಬಹಳಷ್ಟು ವೇದಿಕೆಗಳಲ್ಲಿ ಪ್ರಮುಖ ವೇಷಧಾರಿಯಾಗಿ ಅಭಿನಯಿಸಿದರು. ಸಹಸ್ರಾರು ಕಡೆ ನೃತ್ಯ ಪ್ರದರ್ಶನ ನೀಡಿ, ಸೈ ಅನ್ನಿಸಿಕೊಂಡರು. ಹೀಗೆ ಒಬ್ಬ ಪರಿಪೂರ್ಣ ಕಲಾವಿದೆಯಾದ ಸುಧಾಮೂರ್ತಿಯವರು ಚಳ್ಳಕೆರೆಯ ಸಾಹಿತಿ, ಉದ್ಯಮಿ ಯು.ಎಸ್.ವಿಷ್ಣುಮೂರ್ತಿರಾವ್ ರವರನ್ನು ವಿವಾಹವಾಗಿ ಬಯಲು ನಾಡಿಗೆ ಬಂದವರು. ಆ ಹೊತ್ತಿನಲ್ಲಿ ಈ ಭಾಗದಲ್ಲಿ ಶಾಸ್ತ್ರೀಯ ಭರತನಾಟ್ಯ ಕಲೆಯ ಬಗ್ಗೆ ಅಷ್ಟೊಂದು ಆಸಕ್ತಿ, ಪರಿಚಯವೂ ಇರಲಿಲ್ಲ. ಚಿತ್ರದುರ್ಗ, ದಾವಣಗೆರೆ ಮುಂತಾದ ಊರುಗಳಿಗೆ ಬೆಂಗಳೂರು, ಭದ್ರಾವತಿ ಕಡೆಗಳಿಂದ ಬಂದು ಕೆಲವರು ನೃತ್ಯಪಾಠ ಹೇಳಿ ಕೊಡುತ್ತಿದ್ದರು. ಕೇವಲ ನೃತ್ಯ ಕಲಿಸುವಷ್ಟಕ್ಕೆ ಮಾತ್ರಾ ಅವರು ಸೀಮಿತವಾಗಿದ್ದರು.

 

          ಆದರೆ ಸುಧಾಮೂರ್ತಿ ಚಳ್ಳಕೆರೆಯಲ್ಲಿ ನೃತ್ಯನಿಕೇತನ ಕೇಂದ್ರ ಪ್ರಾರಂಭಿಸಿ, ತಾವು ನೃತ್ಯ ಕಲಿಸಿದ ಶಿಷ್ಯಂದಿರ ತಂಡ ರಚನೆ ಮಾಡಿ, ಬೇರೆ ಬೇರೆ ಊರುಗಳಿಗೆ ಕರೆದೊಯ್ದು ನೃತ್ಯ ಕಾರ್ಯಕ್ರಮ ನೀಡ ತೊಡಗಿದರೋ ಅಲ್ಲಿಗೆ ಚಿತ್ರಣವೇ ಬದಲಾಯಿತು. ಸುಧಾಮೂರ್ತಿಯವರ ಮಧುರ ಸಂಗೀತ, ನೃತ್ಯ ಕಲಾವಿಧರ ಮನೋಜ್ಞ ಅಭಿನಯಗಳಿಂದಾಗಿ ಜನ ಭರತನಾಟ್ಯ ಕಲೆಯಲ್ಲಿ ಆಸಕ್ತಿ ತಾಳಿದರು. ಇವರ ನೃತ್ಯ ಪ್ರದರ್ಶನಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರತೊಡಗಿದರು. ಕೇವಲ ಚಳ್ಳಕೆರೆಯಲ್ಲಷ್ಟೇ ಅಲ್ಲದೇ ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು, ಪರಶುರಾಂಪುರ ಮುಂತಾದ ಕಡೆಗಳಲ್ಲೂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಸುಧಾಮೂರ್ತಿಯವರು ನೃತ್ಯ ಕಲಿಕಾ ಕೇಂದ್ರಗಳನ್ನು ತೆರೆದು ಆಸಕ್ತರಿಗೆ ನೃತ್ಯ, ಸಂಗೀತ ತರಬೇತಿ ನೀಡಿದರು.

 

          ಇವರ ವಿದ್ವತ್ಪೂರ್ಣ ಪಾಂಡಿತ್ಯ, ಕಠಿಣ ಪರಿಶ್ರಮಗಳಿಂದಾಗಿ ನೃತ್ಯನಿಕೇತನ ಸಾಂಸ್ಕೃತಿಕ ಶಿಕ್ಷಣಕೇಂದ್ರ ರಾಜ್ಯ, ಹೊರರಾಜ್ಯಗಳಲ್ಲೂ ಪ್ರಸಿದ್ಧಿ ಪಡೆಯಿತು. ದೂರದರ್ಶನ, ಆಕಾಶವಾಣಿಗಳಲ್ಲೂ ಇವರ ಸಂದರ್ಶನ, ನೃತ್ಯ, ಸಂಗೀತ ಕಾರ್ಯಕ್ರಮಗಳು ಪ್ರಸಾರಗೊಂಡವು. ನಾಡಿನ ಬಹುತೇಕ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಇವರ ಸಾಧನೆಯ ಕುರಿತಂತೆ ಪ್ರಶಂಸಾತ್ಮಕ ಲೇಖನಗಳು ಪ್ರಕಟಗೊಂಡಿವೆ. ನಾಡಿನ ಧಾರ್ಮಿಕ ಕೇಂದ್ರಗಳು, ಮಠ ಮಾನ್ಯಗಳು, ಸಂಘ ಸಂಸ್ಥೆಗಳು, ಅಂತರ್ರಾಷ್ಟ್ರೀಯ ಮಾನ್ಯತೆ ಪಡೆದ ರೋಟರಿ, ಲಯನ್ಸ್, ಜೇಸಿಸ್ ಮುಂತಾದ ಸಮಾಜ ಸೇವಾ ಸಂಸ್ಥೆಗಳು ಶ್ರೀಮತಿ ಸುಧಾಮೂರ್ತಿಯವರ ಸಾಂಸ್ಕೃತಿಕರಂಗದ ಸೇವೆ ಮತ್ತು ಸಾಧನೆಗಳನ್ನು ಗುರುತಿಸಿ, ವಿವಿಧ ಪ್ರಶಸ್ತಿ, ಪುರಸ್ಕಾರಗಳನ್ನಿತ್ತು ಸಾರ್ವಜನಿಕ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಿವೆ. ಇವೆಲ್ಲಕ್ಕೂ ಕಳಸವಿಟ್ಟಂತೆ ಘನ ಕರ್ನಾಟಕ ಸರ್ಕಾರದವರು 2005ನೇ ಸಾಲಿನಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಬಂಗಾರದ ಪದಕದೊಂದಿಗೆ ನೀಡಿದ್ದಾರೆ.

 

          ಚಿತ್ರದುರ್ಗ ನಗರ ಸಭೆಯವರು ಅತ್ಯಂತ ಗೌರವ ಪೂರ್ವಕವಾಗಿ ನಾಟ್ಯಮಯೂರಿ ಎಂಬ ಬಿರುದನ್ನಿತ್ತು ಪೌರ ಸನ್ಮಾನ ನೀಡಿದ್ದೂ ವಿಶೇಷ ಗೌರವಿಸಿದೆ. ಇಂದು ನಾಡಿನ ವಿವಿಧ ಭಾಗಗಳಲ್ಲಿ ಗುರು ಸುಧಾಮೂರ್ತಿಯವರಲ್ಲಿ ಸಂಗೀತ, ನೃತ್ಯ ಕಲಿತ ಶಿಷ್ಯರು ತಾವೇ ಗುರುಗಳಾಗಿ ಕಲಾ ತರಬೇತಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಚಳ್ಳಕೆರೆಯೊಂದರಲ್ಲೇ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ನೃತ್ಯನಿಕೇತನ ಸಾಂಸ್ಕೃತಿಕ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ನೃತ್ಯ ನಿಕೇತನ ಕಲಾವಿದರು ದುಬೈ, ಶಾರ್ಜಾ, ಅಬುದಾಬಿ ಮುಂತಾದ ಹೊರ ರಾಷ್ಟ್ರಗಳಿಗೂ ತೆರಳಿ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಬಯಲು ನಾಡಿನಲ್ಲಿ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸಿದ ಕೀರ್ತಿ ನೃತ್ಯ ನಿಕೇತನ ಕೇಂದ್ರದ್ದೆಂದರೆ ಖಂಡಿತಾ ಅತಿಶಯೋಕ್ತಿಯಲ್ಲ.


ಲೇಖಕರು : ಯು. ಎಸ್ .ವಿಷ್ಣುಮೂರ್ತಿರಾವ್ , ಸಾಹಿತಿಗಳು ಹಾಗು ಪತ್ರಕರ್ತರು, ಚಳ್ಳಕೆರೆ.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.