A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಕಲೆ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
'ಚಿತ್ರಕಲಾ'ದುರ್ಗ
'ಚಲನಚಿತ್ರ'ದುರ್ಗ
ಜಾನಪದ ಕಲೆಗಳು
ನಾಟ್ಯಕಲೆ

        

ಚಿತ್ರದುರ್ಗದ ಸ್ಮಾರಕಗಳ ಮಹತ್ವವನ್ನು ಎತ್ತಿ ಹಿಡಿಯುವುದರಲ್ಲಿ ಇತಿಹಾಸಕಾರರು, ಲೇಖಕರು, ಕವಿಗಳೊಂದಿಗೆ ವರ್ಣ/ರೇಖಾಚಿತ್ರ ಕಲಾವಿದರ ಕೊಡುಗೆ ಅನನ್ಯ. ಅರವತ್ತರ ದಶಕ ಮತ್ತು ಆನಂತರದಲ್ಲಿ ಕ.ರಾ.ಕೃ. ಅವರ ಸಂಗ್ರಹಗಳಿಗಾಗಿ ವರ್ಣಚಿತ್ರ ಮತ್ತು ರೇಖಾಚಿತ್ರಗಳಲ್ಲಿ ದುರ್ಗದ ಚಾರಿತ್ರಿಕ ಸನ್ನಿವೇಶಗಳನ್ನು ಬಿಡಿಸುವ ಎಸ್.ನಂಜುಂಡಸ್ವಾಮಿ (ಎಸ್.ಎನ್.ಸ್ವಾಮಿ), ಆರ್.ಎನ್.ನಾಯ್ಡು, ಜಿ.ವೈ.ಹುಬ್ಬಳ್ಳಿಕರ್ ಅವರಾಗಲೀ, ವಿವಿಧ ಸಂಧರ್ಭದಲ್ಲಿ ಜಲ/ತೈಲವರ್ಣ ಮತ್ತು ರೇಖಾಚಿತ್ರಗಳಲ್ಲಿ ದುರ್ಗದ ಹಲವಾರು ಸ್ಮಾರಕಗಳನ್ನು ಬಿಡಿಸಿದ ನಿಸರ್ಗ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿಯವರಾಗಲೀ, ದುರ್ಗದವರ ಜನಮಾನಸಗಳಲ್ಲಿ ಇಂದಿಗೂ ನೆಲೆಸಿದ್ದಾರೆ. ಪಾಳೆಯಗಾರರ ಕಾಲದ ಸಾಂಸ್ಕೃತಿಕ ಸನ್ನಿವೇಶಗಳು ಕಣ್ಣೆದುರು ಜೀವಂತವಾಗಿ ಸುಳಿಯುವಷ್ಟರ ಮಟ್ಟಿಗೆ ಇವರ ಕಲಾಕೃತಿಗಳು ಪ್ರಭಾವಶಾಲಿಯಾಗಿವೆ. ನಾಯಕ ಮನೆತನದವರ ಭಾವಚಿತ್ರಗಳು ತಿಪ್ಪೇಸ್ವಾಮಿಯವರ ಕಲಾಕುಂಚದಿಂದ ಅರಳಿವೆ. ಇವರಿಂದ ದುರ್ಗಕ್ಕಾದ ಇನ್ನೊಂದು ಲಾಭವೆಂದರೆ, ಚಿತ್ರದುರ್ಗದ ನಾಯಕ ವಂಶಜರ ಕೆಲವು ಮೂಲಚಿತ್ರಗಳನ್ನ ಶೋಧಿಸಿ ಬೆಳಕಿಗೆ ತಂದರು.

 

        ನಂಜುಂಡಸ್ವಾಮಿ ಮತ್ತು ತಿಪ್ಪೇಸ್ವಾಮಿಯವರೊಡನೆ ಗುರುತಿಸಬೇಕಾದ ಇನ್ನೋರ್ವ ಪ್ರತಿಭಾಶಾಲಿ ಕಲಾವಿದರೆಂದರೆ ಜಿ.ಕೆ.ಸತ್ಯ. ಚಿತ್ರದುರ್ಗ ಇತಿಹಾಸಕ್ಕೆ ಸಂಭಂಧಿಸಿದ ಲೇಖನ, ಪುಸ್ತಕ ಇತ್ಯಾದಿಗಳಿಗೆ ಸಾಂಧರ್ಭಿಕ ಚಿತ್ರ ಮತ್ತು ಹೊರಮೈ ಚಿತ್ರಗಳನ್ನು ರಚಿಸುವುದರೊಡನೆ ದುರ್ಗದ ಸ್ಮಾರಕಗಳಿಗೆ ಹೊಸ ಅರ್ಥವನ್ನು ತಂದುಕೊಟ್ಟವರು. ತಮ್ಮ ಹದಿಮೂರನೇ ವಯಸ್ಸಿನಲ್ಲಿ ರಾಜಾ ವೀರ ಮೆದಕೇರಿನಾಯಕನ ಮೂಲ ಚಿತ್ರವನ್ನಾಧರಿಸಿ ಪೆನ್ಸಿಲ್ ನಲ್ಲಿ ರಚಿಸಿದ ಭಾವಚಿತ್ರವೊಂದು ಇಂದಿಗೂ ಚಿತ್ರದುರ್ಗದ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿದೆ. ಕಳೆದ ಶತಮಾನವಿಡೀ ದುರ್ಗದ ಮಟ್ಟಿಗೆ ಇದೊಂದು ಆಕರ್ಷಣೀಯ ಕಲಾಕೃತಿಯಾಗಿದ್ದಿತೆಂದು ಜಿ.ಕೆ.ಸತ್ಯ ಅವರ ಕಲಾಸಾಮರ್ಥ್ಯದ ಪರಿಚಯವಾಗುತ್ತದೆ. ಇಲ್ಲಿ ಗುರುತಿಸಬೇಕಾದ ಇನ್ನೋರ್ವ ಭರವಸೆಯ ಕಲಾವಿದರೆಂದರೆ ಮೋಹನಮುರುಳಿ ತಳಕು. ಚಿತ್ರದುರ್ಗ ಸಂಶೋಧನ ತಂಡದ ಸದಸ್ಯರೂ ಆಗಿರುವ ಈ ಕಲಾವಿದ, ದುರ್ಗದ ಸ್ಮಾರಕಗಳನ್ನು ವಿಭಿನ್ನ ಆಯಾಮಗಳಿಂದ ವೀಕ್ಷಿಸಿ ಕಲಾಕೃತಿಗಳನ್ನಾಗಿಸಿದುದು ಗಮನಾರ್ಹ. ಪುಸ್ತಕಗಳಿಗೆ, ಸಂಚಿಕೆಗಳಿಗೆ ಆಕರ್ಷಕ ರೇಖಾಕೃತಿ ಕಲೆಯನ್ನು ರಚಿಸಿರುವವರೆಂದರೆ ಹರ್ತಿಕೋಟೆಯ ಹೆಚ್.ವಿ. ಪ್ರತಾಪಸಿಂಹ, ವಿ.ಆರ್.ಸಿ.ಶೇಖರ್, ಕಮಲೇಶ್ ಮೊದಲಾದವರು. ಚಿತ್ರದುರ್ಗದ ಎಸ್.ಜೆ.ಎಂ. ಸ್ಕೂಲ್ ಆಫ್ ಆರ್ಟ್ಸ್ ಅಲ್ಲದೇ, ರಾಜ್ಯದ ವಿವಿಧ ಕಲಾವಿದರು, ಕಲಾವಿದ್ಯಾರ್ಥಿಗಳು ಹಾಗೂ ಹವ್ಯಾಸಿಗರು ದುರ್ಗದ ಕೋಟೆ-ಕೊತ್ತಲ-ಸ್ಮಾರಕಗಳನ್ನು ರೇಖೆಯಲ್ಲಿಯೂ ವರ್ಣದಲ್ಲಿಯೂ ಚಿತ್ರಿಸಿದ್ದಾರೆ.

 

        ಚಿತ್ರದುರ್ಗದ ಹಳೇಯ ತಲೆಮಾರಿನ ತೈಲವರ್ಣಚಿತ್ರ ಕಲಾವಿದರಲ್ಲಿ 1915ರಲ್ಲಿ ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ಶ್ರೀ ಕೃಷ್ಣ ಫೋಟೊ ಆರ್ಟ್ಸ್ ಸ್ಟುಡಿಯೋ ಸ್ಥಾಪಿಸಿದ ಎಲ್.ಆರ್.ಕೃಷ್ಣಪ್ಪನವರೂ ಒಬ್ಬರು. ಇವರು ಛಾಯಾಗ್ರಹಣ (Photography), ಕಲೆಯಲ್ಲಿ ನುರಿತಂತೆಯೇ ಗಾಜಿನ ಚಿತ್ರಕಲೆ (Glass painting)ಯಲ್ಲಿಯೂ ಪಳಗಿದವರು. ಇವರು ಚಿತ್ರದುರ್ಗ ನಾಯಕ ಅರಸರನ್ನು ನೆನಪಿಸುವಂಥಾ ಕೆಲವಾರು ವ್ಯಕ್ತಿ ಭಾವಚಿತ್ರಗಳನ್ನು ಗಾಜಿನ ಮೇಲೆ ಮೂಡಿಸಿರುವುದುಂಟು. ಇನ್ನಿತರ ವೃತ್ತಿಪರ ವರ್ಣಚಿತ್ರ ಕಲಾವಿದರಲ್ಲಿ ವಿಠ್ಠಲರಾವ್ ಶಿಂಧೆ, ಎಸ್.ಶ್ರೀನಿವಾಸ್, ಎಂ.ದೇವೆಂದ್ರನಾಥ್, ಕೆ.ಎನ್.ಸುಲ್ತಾನ್ ಮೊದಲಾದವರನ್ನು ಉಲ್ಲೇಖಿಸಬಹುದು.

 

        ಚಿತ್ರದುರ್ಗದ ಆಕಾಶವಾಣಿ ನಿಲಯದಲ್ಲಿರುವ ಚಿತ್ರದುರ್ಗ ಸ್ಮಾರಕಗಳನ್ನು ಒಳಗೊಂಡ ದೊಡ್ಡ ಅಳತೆಯ ತೈಲವರ್ಣಚಿತ್ರವನ್ನು ರಚಿಸಿಕೊಟ್ಟ ಕಲಾವಿದರೆಂದರೆ ವಿಠ್ಠಲರಾವ್ ಶಿಂಧೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಚಿತ್ರದುರ್ಗ ಸ್ಮಾರಕಗಳ ಆಕರ್ಷಕ ತೈಲವರ್ಣಚಿತ್ರಗಳು ವಿಷ್ಣು ಆರ್ಟ್ಸ್ ಬಳಗದ ಕಲಾವಿದ ಕೆ.ಎನ್.ಸುಲ್ತಾನ್ ಅವರವು. ಉದಯಭಾನು ಆರ್ಟ್ಸ್ ಸ್ಟುಡಿಯೋದ ಎಂ.ದೇವೆಂದ್ರನಾಥ್ ಅವರು ನಾಯಕ ಅರಸರನ್ನು ಹೋಲುವ ಭಾವಚಿತ್ರಗಳ ರಚನೆಯಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಚಿತ್ರದುರ್ಗ ಸಂಸ್ಥಾನದ ತೈಲವರ್ಣದಲ್ಲಿ ಮೂಡಿಸಿದ್ದಾರೆ. ವಿ.ಬಿ.ಹಿರೇಗೌಡರ್ ಇಂಥಾ ಪ್ರಯತ್ನಗಳನ್ನು ನಡೆಸಿದವರದಲ್ಲಿ ಇನ್ನೂ ಕೆಲವರಿದ್ದಾರೆ.


(ಆಧಾರ: ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನದ ವ್ಯಾಪಕತೆ ಮತ್ತು ಸಾಧ್ಯತೆ ಪ್ರೋ.ಲಕ್ಷ್ಮಣ ತೆಲಗಾವಿ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.